ಕೇಂದ್ರದಿಂದ ರಾಜ್ಯಕ್ಕೆ ಮಲತಾಯಿ ಧೋರಣೆ | ಬಿ.ವೈ. ವಿಜಯೇಂದ್ರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ NSUI ಕಾರ್ಯಕರ್ತರು ಪೊಲೀಸರ ವಶಕ್ಕೆ

0 184

ಶಿವಮೊಗ್ಗ : ರಾಜ್ಯಕ್ಕೆ ನೀಡಬೇಕಾದ ತೆರಿಗೆ ಹಣವನ್ನು ನೀಡದೇ ಇರುವ ಕೇಂದ್ರ‌ ಬಿಜೆಪಿ ಸರ್ಕಾರ ವಿರುದ್ಧ ದೆಹಲಿಯಲ್ಲಿ ಇಂದು ಪ್ರತಿಭಟನೆ ಕೈಗೊಂಡಿದ್ದು, ಇದನ್ನು ಬೆಂಬಲಿಸಿ ನಗರದಲ್ಲಿಂದು ಎನ್.ಎಸ್.ಯು.ಐ. ಕಾರ‍್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದು, ಅವರನ್ನು ಬಂಧಿಸಲಾಗಿದೆ.

ಕರ್ನಾಟಕದ ಮೇಲೆ ಆರ್ಥಿಕ ದೌರ್ಜನ್ಯ ಎಸಗಿರುವ ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ 1 ಲಕ್ಷದ 87 ಸಾವಿರ ಕೋಟಿ ತೆರಿಗೆ ಹಣ ಕೊಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರ ರಾಜ್ಯಕ್ಕೆ ಮೊದಲಿನಿಂದಲೂ ಮಲತಾಯಿ ಧೋರಣೆ ತೋರುತ್ತಿದ್ದು, ಕರ್ನಾಟಕ ಮತ್ತು ಕನ್ನಡಿಗರ ಮೇಲೆ ಆರ್ಥಿಕ ದೌರ್ಜನ್ಯ ಎಸಗುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ 2017-18ರಿಂದ ಜಿ.ಎಸ್.ಟಿ. ತೆರಿಗೆ ಹಣ ಕೊಡದೇ ದೌರ್ಜನ್ಯ ಎಸಗುತ್ತಿದೆ. ಈವರೆಗೂ ರಾಜ್ಯಕ್ಕೆ 1 ಲಕ್ಷದ 87 ಸಾವಿರ ಕೋಟಿ ಜಿ.ಎಸ್.ಟಿ. ತೆರಿಗೆ ಹಣ ಕೊಡಬೇಕಿದ್ದು, ಇದನ್ನು ಕೊಟ್ಟಿರುವುದಿಲ್ಲ. ಬರ ಪರಿಹಾರಕ್ಕೆ ರಾಜ್ಯ ಸರ್ಕಾರ 18,177 ಕೋಟಿ ರೂ. ಬೇಡಿಕೆ ಸಲ್ಲಿಸಿದ್ದರೂ ಈ ವರೆಗೂ ಬಿಡಿಗಾಸು ಸಹ ನೀಡಿಲ್ಲ. ತೆರಿಗೆ ಪಾಲಿನಲ್ಲಿ ತಾರತಮ್ಯ ಅನುಸರಿಸುತ್ತಿದ್ದು, ಶೇ.4.77ರಿಂದ ಶೇ. 3.64ಕ್ಕೆ ಇಳಿಸಿದೆ. ಇದರಿಂದ ರಾಜ್ಯಕ್ಕೆ 62,098 ಕೋಟಿ ನಷ್ಟವಾಗಿದೆ ಎಂದರು.

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಜ್ಯ ಸರ್ಕಾರ 2023-24ನೇ ಸಾಲಿನಲ್ಲಿ ಘೋಷಿಸಿದ್ದು, ಯೋಜನೆಗೆ 5,300 ಕೋಟಿ ವೆಚ್ಚವಾಗಲಿದ್ದು, ಕೇಂದ್ರ ಸರ್ಕಾರ ಒಂದು ರೂಪಾಯಿಯ ಅನುದಾವನ್ನೂ ನೀಡಿರುವುದಿಲ್ಲ. 15ನೇ ಹಣಕಾಸು ಆಯೋಗವು ರಾಜ್ಯಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ಶಿಫಾರಸ್ಸು ಮಾಡಿದ್ದರೂ ಈ ವರೆಗೂ ಬಿಡಿಗಾಸು ಸಹ ಕೊಟ್ಟಿರುವುದಿಲ್ಲ. ಸಹಭಾಗಿತ್ವ ಯೋಜನೆಗೆ 2021-21ನೇ ಸಾಲಿನಲ್ಲಿ 20 ಸಾವಿರ ಕೋಟಿ ಇದ್ದದ್ದನ್ನು 2022-23ನೇ ಸಾಲಿನಲ್ಲಿ 13 ಸಾವಿರ ಕೋಟಿ ರೂ.ಗಳಿಗೆ ಕಡಿತಗೊಳಿಸಿದೆ. ಏಮ್ಸ್ ಮಹದಾಯಿ ಯೋಜನೆಗೆ ಮನ್ನಣೆ ನೀಡದೇ ಕನಸಾಗೇ ಉಳಿಯುವಂತೆ ಮಾಡಿದೆ ಎಂದು ದೂರಿದರು.

ಇದೆಲ್ಲವೂ ಕೇಂದ್ರ ಸರ್ಕಾರ ಕನ್ನಡಿಗರಿಗೆ ಕರ್ನಾಟಕಕ್ಕೆ ಎಸಗುತ್ತಿರುವ ಅರ್ಥಿಕ ದೌರ್ಜನ್ಯವಾಗಿದ್ದು, ರಾಜ್ಯದ ಮೇಲೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. ರಾಜ್ಯಕ್ಕೆ ಸಲ್ಲಬೇಕಾದ ತೆರಿಗೆ ಹಣವನ್ನು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಿಗೆ ಹಂಚಿಕೆ ಮಾಡುವ ಮೂಲಕ ರಾಜ್ಯಕ್ಕೆ ಅನ್ಯಾಯ ಎಸಗುತ್ತಿದೆ ಎಂದು ದೂರಿದರು.

ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://www.facebook.com/share/v/3RwLN3Qe7EUrNed4/?mibextid=qi2Omg

ಕೂಡಲೇ ಕೇಂದ್ರ ಸರ್ಕಾರ ತನ್ನ ನೀತಿ ಬದಲಾಯಿಸಬೇಕು. ರಾಜ್ಯಕ್ಕೆ ಬರಬೇಕಾದ 1 ಲಕ್ಷದ 87 ಸಾವಿರ ಕೋಟಿ ತೆರಿಗೆ ಹಣವನ್ನು ಕೂಡಲೇ ನೀಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಎನ್.ಎಸ್.ಯು.ಐ ನ 33 ಹೆಚ್ಚು ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿ.ಎ. ರಮೇಶ್ ಹೆಗ್ಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಮ್ ಪಾಷ, ನೂರುಲ್ಲಾ, ಯುವ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್, ಯುವ ಮುಖಂಡ ಮಧುಸೂದನ್, ಶಿವು ಸೂಡೂರು, ಅಕ್ಬರ್, ಗಿರೀಶ್, ವಿಜಯ್, ರವಿ ಕಾಟಿಕೆರೆ, ಹರ್ಷಿತ್ ಗೌಡ, ಧನರಾಜ್, ಗೌತಮ್, ರವಿ, ಚಂದ್ರ ಜಿ ರಾವ್, ಟ್ರೋಫಿಕ್, ಅಬ್ದುಲ್, ವರುಣ್ ಪಂಡಿತ್, ಉಲ್ಲಾಸ್, ದೀಪು, ಸಾಗರ್, ಸೃಜನ, ತೇಜು ಇದ್ದರು.

Leave A Reply

Your email address will not be published.

error: Content is protected !!