ರಸಗೊಬ್ಬರಕ್ಕೆ ಸಬ್ಸಿಡಿ ನೀಡಲು ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡುವಂತೆ ಆಗ್ರಹ

0 49

ಶಿವಮೊಗ್ಗ: ರಸಗೊಬ್ಬರಕ್ಕೆ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಟ್ರಸ್ಟ್ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಇಂದು ಮನವಿ ಸಲ್ಲಿಸಿತು.


ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೈತರು ಬಳಸುವ ರಸಗೊಬ್ಬರದ ಬೆಲೆ ಏರಿಕೆ ಆಗುತ್ತಿದೆ. ರಷ್ಯಾ ದೇಶ ಸರಬರಾಜು ಮಾಡುತ್ತಿದ್ದ ರಸಗೊಬ್ಬರಗಳ ಮೇಲಿನ ರಿಯಾಯಿತಿ ಸೌಲಭ್ಯ ಹಿಂಪಡೆದಿರುವುದರಿಂದ ಗೊಬ್ಬರದ ಬೆಲೆ ಏರಿಕೆಯಾಗಿದೆ. ಇಂತಹ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರ ರಸಗೊಬ್ಬರಗಳ ಮೇಲೆ ಸಬ್ಸಿಡಿ ನೀಡಬೇಕು. ರಾಜ್ಯ ಸರ್ಕಾರ ಕೂಡ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.


ಭಾರತದ ರೈತರು ವ್ಯವಸಾಯವನ್ನೇ ನಂಬಿದ್ದಾರೆ. ರಸಗೊಬ್ಬರದ ಬೆಲೆ ಏರಿಕೆಯಾದರೆ ಸಹಜವಾಗಿಯೇ ರೈತರಿಗೆ ಭಾರವಾಗುತ್ತದೆ. ಇದರ ಜೊತೆಗೆ ಕೇಂದ್ರ ಸರ್ಕಾರ ಪ್ರತಿ ವಸ್ತುಗಳ ಮೇಲೆ ಜಿಎಸ್ಟಿ ವಿಧಿಸಿದೆ. ಕೋಟ್ಯಂತರ ರೂ.ಗಳನ್ನು ಕೇಂದ್ರ ಸರ್ಕಾರ ಸಂಗ್ರಹಿಸುತ್ತಿದೆ ಎಂದು ಮನವಿದಾರರು ತಿಳಿಸಿದರು.


ಕೇಂದ್ರ ಸರ್ಕಾರ ಅದಾನಿ, ಅಂಬಾನಿ ಮುಂತಾದ ಬಹುರಾಷ್ಟ್ರೀಯ ಕಂಪನಿಗಳಿಗೆ ಹಲವು ಸಂದರ್ಭದಲ್ಲಿ ರಿಯಾಯಿತಿ ಘೋಷಣೆ ಮಾಡಿದೆ. ಆದರೆ ದೇಶದ ಬೆನ್ನೆಲುಬಾಗಿರುವ ರೈತರು ಬಳಸುವ ರಸಗೊಬ್ಬರಕ್ಕೆ ಸಬ್ಸಿಡಿ ನೀಡುವಲ್ಲಿ ಮೀನಾ ಮೇಷ ಎಣಿಸುತ್ತಿದೆ. ಆದ್ದರಿಂದ ಕೇಂದ್ರ ಸಕಾರ ತಕ್ಷಣವೇ ರೈತರ ನೆರವಿಗೆ ಬರಬೇಕು. ರಾಜ್ಯ ಸರ್ಕಾರ ಕೂಡ ಕೇಂದ್ರಕ್ಕೆ ಮನವಿ ಮಾಡಬೇಕು ಎಂದು  ಮನವಿಯಲ್ಲಿ ತಿಳಿಸಲಾಗಿದೆ.


ಈ ಸಂದರ್ಭದಲ್ಲಿ ಟ್ರಸ್ಟಿನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಹೆಚ್.ಎಂ. ಸಂಗಯ್ಯ, ಎಂ.ವಿ. ರಾಜಮ್ಮ, ಪ್ರೊ. ಡಾ. ಕಲ್ಲನ, ಕೆ.ಆರ್. ಶಿವಣ್ಣ, ಶಂಕ್ರಾ ನಾಯ್ಕ ಮಂಜನಾಥ, ಗೋಪಾಲಕೃಷ್ಣ, ಎಸ್.ಜಿ.ಸುರೇಶ್, ಎನ್. ನಾಗೇಶ ರಾವ್. ಬಿ.ಟಿ. ಮಂಜನಾಯ್ಕ ಇದ್ದರು

Leave A Reply

Your email address will not be published.

error: Content is protected !!