ಲಂಚ ಸ್ವೀಕರಿಸುತ್ತಿದ್ದಾಗ ಪುರಸಭೆ ಕೇಸ್ ವರ್ಕರ್ ಲೋಕಾಯುಕ್ತ ಬಲೆಗೆ !

0 78

ಸೊರಬ: ಪಟ್ಟಣದ ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಕಲಾ 15 ಸಾವಿರ ರೂ., ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಮಂಗಳವಾರ ನಡೆದಿದೆ.

ಪುರಸಭೆಯಲ್ಲಿ ನೇರ ಪಾವತಿ ಪೌರ ಕಾರ್ಮಿಕಳಾದ ಚಂದ್ರಕಲಾ ಕಂದಾಯ ವಿಭಾಗದ ಸೇವಾ ನಿರ್ವಾಹಕಿಯಾಗಿ (ಕೇಸ್ ವರ್ಕರ್) ಕಾರ್ಯನಿರ್ವಹಿಸುತ್ತಿದ್ದರು. ಪುರಸಭೆ ವ್ಯಾಪ್ತಿಗೆ ಒಳಪಡುವ ಹೊಸಪೇಟೆ ಬಡಾವಣೆಯ ಸರ್ವೆ 179ರಲ್ಲಿನ ನಿವೇಶನವನ್ನು ಭಾಸ್ಕರ ಶೆಟ್ಟಿ ಎಂಬುವವರು ಖರೀದಿ ಮಾಡಿದ್ದರು. ಈ ಬಗ್ಗೆ ಖಾತೆ ಬದಲಾವಣೆಗೆ ಜೂ. 17ರಂದು ಅರ್ಜಿಸಲ್ಲಿಸಿದ್ದರು. ಖಾತೆ ಬದಲಾವಣೆಗೆ ಚಂದ್ರಕಲಾ 15 ಸಾವಿರ ರೂ., ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಭಾಸ್ಕರ ಶೆಟ್ಟಿ ಅವರು ಬೆಂಗಳೂರಿನಲ್ಲಿ ವಾಸವಿದ್ದ ಹಿನ್ನೆಲೆ ಅವರ ಸಹೋದರ ಮಂಜುನಾಥ ಅವರು ಖಾತೆ ಬದಲಾಯಿಸಲು ಮುಂದಾಗಿದ್ದರು.

ಈ ಹಿಂದೆ ಜೂ.21ರಂದು ಕಚೇರಿಗೆ ಆಗಮಿಸಿದ ವೇಳೆ ಖಾತೆ ಬದಲಾವಣೆಗೆ 15 ಸಾವಿರ ರೂ., ನೀಡುವಂತೆ ಬೇಡಿಕೆ ಇಟ್ಟಿರುವ ಕುರಿತು ಮಂಜುನಾಥ್ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಲಂಚ ಸ್ವೀಕರಿಸುತ್ತಿರುವ ವೇಳೆ ಲೋಕಾಯುಕ್ತ ಪೊಲೀಸರು ಚಂದ್ರಕಲಾ ಅವರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಪಟ್ಟಣ ಪಂಚಾಯ್ತಿ ಇದ್ದ ವೇಳೆಯಿಂದಲೂ ಗುತ್ತಿಗೆ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದ ಚಂದ್ರಕಲಾ ಅವರನ್ನು ಕಳೆದ ಐದು ತಿಂಗಳ ಹಿಂದೆ ಖಾಯಂ ನೌಕರರಾಗಿ ಸರ್ಕಾರ ನೇಮಕ ಮಾಡಿತ್ತು.

ಲೋಕಾಯುಕ್ತ ಎಸ್ಪಿ ಎನ್. ವಾಸುದೇವರಾಮ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್‍ಪಿ ಉಮೇಶ್ ಈಶ್ವರನಾಯ್ಕ್ ಅವರ ನೇತೃತ್ವ ನಡೆದ ದಾಳಿಯಲ್ಲಿ ಪೊಲೀಸ್ ಇನ್ಸ್ ಫೆಕ್ಟರ್ ರಾಧಾಕೃಷ್ಣ, ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!