ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಕಿಮ್ಮನೆ ರತ್ನಾಕರ್ ಅವರ ರಾಜಕೀಯ ಪ್ರೇರಿತ ಹೇಳಿಕೆಗಳು ಖಂಡನೀಯ: ಎಸ್ ದತ್ತಾತ್ರಿ

0
179

ಶಿವಮೊಗ್ಗ: ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಅವರ ರಾಜಕೀಯ ಪ್ರೇರಿತ ಹೇಳಿಕೆಗಳು ಖಂಡನೀಯ ಎಂದು ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಎಸ್ ದತ್ತಾತ್ರಿ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಿಕ್ಷಣಕ್ಕೊಂದು ನೂತನ ಸ್ವರೂಪ ನೀಡುವುದೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶ. ವಿದ್ಯಾರ್ಥಿಗಳ ಚಾರಿತ್ರ್ಯ ರೂಪಿಸುವ ಜೊತೆಗೆ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಕೊಡುಗೆ ನೀಡುವಂತಹ ಸ್ವಾಭಿಮಾನಿ, ಸ್ವಾವಲಂಬಿ ಪೀಳಿಗೆಯನ್ನು ರೂಪಿಸುವುದೇ ಅದರ ಧ್ಯೇಯ. ಆ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (NEP) – 2020 ದೇಶದ ಶಿಕ್ಷಣ ವಲಯದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ. ಏಕೆಂದರೆ ಶಿಕ್ಷಣದ ಮುಖ್ಯ ಗುರಿಯನ್ನು ಎನ್ಇಪಿ ತುಂಬಾ ಸ್ಪಷ್ಟವಾಗಿ ಗುರುತಿಸಿದೆ ಹಾಗೂ ಅದನ್ನು ಮುಟ್ಟಲು ವಾಸ್ತವಿಕ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ಸಂಪೂರ್ಣ ವಿದ್ಯಾರ್ಥಿ ಕೇಂದ್ರಿತ. ವಿದ್ಯಾರ್ಥಿಯ ಉನ್ನತಿಯ ಉದ್ದೇಶವನ್ನು ಹೊರತುಪಡಿಸಿದರೆ, ಇನ್ಯಾವ ರಹಸ್ಯ ಕಾರ್ಯಸೂಚಿಯೂ ಇಲ್ಲದ ಸರ್ವಶ್ರೇಷ್ಠ ನೀತಿ ಇದು. 34 ವರ್ಷಗಳ ನಂತರ ಬಂದ ಏಕೈಕ ಶಿಕ್ಷಣ ನೀತಿಯ ಬಗ್ಗೆ, ಈಗ ಜನರಲ್ಲಿ ಅನಗತ್ಯ ಗೊಂದಲ ಉಂಟು ಮಾಡುವ ಕೆಲಸ, ಷಡ್ಯಂತ್ರ ನಡೆಯುತ್ತಿದೆ.

ನಿನ್ನೆ ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ಅವರು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ವಿರುದ್ಧ ಹೇಳಿಕೆಯನ್ನು ನೀಡಿದ್ದಾರೆ. ಯಾವುದೇ ಚರ್ಚೆ ಇಲ್ಲದೆ ತರಾತುರಿಯಾಗಿ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗಿದೆ ಎನ್ನುವ ಮೂಲಕ ಅವರು ಶಿಕ್ಷಣದ ರಾಜಕಾರಣ ಮಾತನಾಡುತ್ತಿದ್ದಾರೆ.

ನಿಜ ನಮ್ಮ ಸರ್ಕಾರ ಬೇರೆ ರಾಜ್ಯಗಳಿಗಿಂತ ಮೊದಲೇ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ತಂದಿದೆ. ನಮ್ಮ ಸರ್ಕಾರಕ್ಕೆ ಬದ್ಧತೆಟಟಟ ಇದೆ, ಉತ್ಸಾಹವಿದೆ, ಹೀಗಾಗಿ ಶಿಕ್ಷಣ ನೀತಿ ದೇಶದಲ್ಲೇ ಮೊದಲು ಜಾರಿಗೆ ಬಂದಿದೆ ಹಾಗೂ ಸಾಕಷ್ಟು ತಯಾರಿ ಮಾಡಿಕೊಂಡು ಜಾರಿಗೆ ತರಲಾಗಿದೆ.

ಕೇಂದ್ರದಲ್ಲಿ ಶಿಕ್ಷಣ ನೀತಿಯ ಕರಡು ರಚನಾ ಸಮಿತಿ ಇಡೀ ನೀತಿಯನ್ನು ಅಂತಿಮಗೊಳಿಸಿ 2019ರಲ್ಲಿ ರಾಜ್ಯಕ್ಕೆ ಕರಡು ಪ್ರತಿ ಕಳಿಸಿದಾಗಲೇ ಇಲ್ಲಿನ ಸರಕಾರ ಜಾಗೃತವಾಯಿತು. ಪ್ರಾಥಮಿಕ ಹಂತದಲ್ಲಿಯೇ ಕೂಲಂಕುಷ ಅಧ್ಯಯನ ಆಗಿ ನಂತರ 2020 ಮಾರ್ಚ್ ನಲ್ಲಿ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಎಸ್.ವಿ ರಂಗನಾಥ್ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಯಿತು.

2020 ರ ಜುಲೈನಲ್ಲಿ ಕೇಂದ್ರ ಸಂಪುಟ ನೀತಿಗೆ ಒಪ್ಪಿಗೆ ಕೊಟ್ಟಿತು. ಕೂಡಲೇ ನಮ್ಮ ಸರಕಾರ ಕಾರ್ಯೋನ್ಮುಖವಾಯಿತು. 2020 ಡಿಸೆಂಬರ್ ನಲ್ಲಿ ಕಾರ್ಯಪಡೆ ವರದಿ ಸಲ್ಲಿಸಿದ ಮೇಲೆ ಸಚಿವ ಸಂಪುಟ ಮತ್ತು ಮೇಲ್ಮನೆಯಲ್ಲೂ ಚರ್ಚೆ ನಡೆಯಿತು. ವಿಧಾನ ಪರಿಷತ್ ಸದಸ್ಯರಿಗೆ ಪ್ರಾತ್ಯಕ್ಷಿಕೆಯನ್ನು ನೀಡಲಾಗಿದೆ. ಎಲ್ಲಾ ವಿವಿಗಳ ಕುಲಪತಿಗಳ ಜೊತೆ ಸಮಾಲೋಚಿಸಲಾಗಿದೆ. ಇದರ ಜೊತೆಯಲ್ಲೇ ಶಿಕ್ಷಣ ನೀತಿ ಜಾರಿಯ ಬಗ್ಗೆ ನಿರಂತರ ಶ್ರಮ, ವಿಷಯವಾರು ತಜ್ಞರ ನೇಮಕ, ಸಮಾಲೋಚನೆಸಿದ್ಧತೆ ನಡೆದಿದೆ. ರಾಜ್ಯದ ಶೈಕ್ಷಣಿಕ ವ್ಯವಸ್ಥೆ ಒಂದು ಸಮಗ್ರ ತಂಡವಾಗಿ ಕೆಲಸ ಮಾಡಿದ ಪರಿಣಾಮ 2021 ಆ. 23 ರಂದು ರಾಜ್ಯದಲ್ಲಿ ವಿದ್ಯುಕ್ತವಾಗಿ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಸಾಧ್ಯವಾಯಿತು.

ಕಿಮ್ಮನೆ ರತ್ನಾಕರ್ ರವರು ಶಿಕ್ಷಣ ನೀತಿ ಜಾರಿಗೆ ತರಲು ಕಸ್ತೂರಿ ರಂಗನ್‌ನಂತಹ ವಿಜ್ಞಾನಿಗಳನ್ನು ನೇಮಿಸಲಾಗಿತ್ತು, ಹಾಗೂ ಸನಾತನ ವಿಷಯಗಳ ವಿಜೃಂಬಿಸುವ ಕೆಲಸ ಮಾಡಲಾಗಿದೆ ಎಂಬ ಮಾತನ್ನು ಆಡಿದ್ದಾರೆ. ಅವರ ಈ ರಾಜಕೀಯ ಪ್ರೇರಿತ ಹೇಳಿಕೆಗಳು ಖಂಡನೀಯ.

ಡಾ. ಕೆ ಕಸ್ತೂರಿ ರಂಗನ್ ರವರ ಬಗ್ಗೆ ಪರಿಚಯದ ಅಗತ್ಯವಿಲ್ಲ, ಆಕಾಶದೆತ್ತರದಷ್ಟು ಸಾಧನೆ ಮಾಡಿದ ನಮ್ಮ ದೇಶದ ಹೆಮ್ಮೆಯ ಬಾಹ್ಯಾಕಾಶ ವಿಜ್ಞಾನಿ, ಇಸ್ರೋ ವಿಶ್ರಾಂತ ಅಧ್ಯಕ್ಷರು ಆದ ಅವರು, ಮತ್ತವರ ತಂಡದ ಐದೂವರೆ ವರ್ಷಗಳ ಅವಿರತ ಶ್ರಮವೇ ರಾಷ್ಟ್ರೀಯ ಶಿಕ್ಷಣ ನೀತಿ. ನಮ್ಮ ರಾಜ್ಯದವರೇ ಆದ ಶ್ರೇಷ್ಠ ಶಿಕ್ಷಣತಜ್ಞ ಡಾ. ಎಂ ಕೆ ಶ್ರೀಧರ್, ಪ್ರಖ್ಯಾತ ವಿದ್ವಾಂಸ ಪ್ರೊ. ಟಿ.ವಿ ಕಟ್ಟಮನಿ ಕರಡು ಸಮಿತಿ ಸದಸ್ಯರಾಗಿದ್ದರು. ಮೂರು ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಪಡೆಯಲಾಗಿದೆ ಎನ್ನುವುದು ಗಮನಾರ್ಹ. ರಾಷ್ಟ್ರಕ್ಕಾಗಿ ಸಮರ್ಪಣಾ ಮನೋಭಾವದಿಂದ ದುಡಿಯುತ್ತಿರುವ ವಿವಿಧ ಕ್ಷೇತ್ರಗಳ ಸಾಧಕರು ರೂಪಿಸಿದ ಶಿಕ್ಷಣ ನೀತಿ ಕೆಲವರಿಗೆ ಮಾತ್ರ ಏಕೆ ಅರ್ಥವಾಗುತ್ತಿಲ್ಲ ಎನ್ನುವುದು ವಿಷಾದನೀಯ ಸಂಗತಿ…

ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಕಾಂಗ್ರೆಸ್ ಅಸಂಬದ್ಧವಾಗಿ ಟೀಕಿಸುತ್ತಿದೆ. ಅವರ ಪ್ರಕಾರ ರಾಜ್ಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಬೇಡವೇ? ಜಾಗತಿಕ ಮಟ್ಟದಲ್ಲಿ ಕನ್ನಡಿಗರ ಪಾರುಪತ್ಯ ಬೇಡವೇ? ಅಂತರರಾಷ್ಟ್ರೀಯವಾಗಿ ನಮ್ಮ ಇವತ್ತಿನ ಶಿಕ್ಷಣದ ಸ್ಪರ್ಧಾತ್ಮಕ ಸೂಚ್ಯಂಕ ಯಾವ ಮಟ್ಟದಲ್ಲಿದೆ ಎಂಬುದನ್ನು ಅವರೇಕೆ ಪರಿಶೀಲನೆ ಮಾಡುತ್ತಿಲ್ಲ?

ಹೊಸ ರಾಷ್ಟ್ರೀಯ ಶಿಕ್ಷಣದ ಮೂಲಕ 2030ರ ವೇಳೆಗೆ ಶೇಕಡ 100 ರಷ್ಟು ಯುವ ಜನತೆ ಮತ್ತು ವಯಸ್ಕರ ಸಾಕ್ಷರತೆ ತರುವ ಗುರಿ ನಮ್ಮ ಉದ್ದೇಶವಾಗಿದೆ. ಪ್ರಾರ್ಥಮಿಕ, ಪ್ರೌಢ ಶಿಕ್ಷಣದ ಹಂತದಲ್ಲೇ ಸರ್ವರಿಗೂ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಒದಗಿಸಿ ಒಬ್ಬ ವ್ಯಕ್ತಿಯನ್ನು ಮುಕ್ತ ಮನಸ್ಸಿನಿಂದ ತಾರ್ಕಿಕವಾಗಿ ಆಲೋಚಿಸುವಂತೆ ಮಾಡುವುದೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶವಾಗಿದೆ.

ಮಗುವೊಂದು ಶಾಲಾ ವ್ಯವಸ್ಥೆ ಸೇರಿ 15 ವರ್ಷಗಳ ಕಾಲ ಶಿಕ್ಷಣ ಪಡೆದು ಯುವಕನಾಗಿ ಹೊರಬಂದಾಗಲೂ ಆರ್ಥಿಕವಾಗಿ ಸ್ವತಂತ್ರವಾಗಲು ಕೌಶಲ್ಯದ ಕೊರತೆ ಅಡ್ಡಿ ಮಾಡುತ್ತದೆ. ಆದ್ದರಿಂದಲೇ ಶಿಕ್ಷಣದ ಸ್ವರೂಪದಲ್ಲಿ ತಕ್ಕ ಮಾರ್ಪಾಡುಗಳನ್ನು ಎನ್ಇಪಿ ಯಲ್ಲಿ ಹೇಳಲಾಗಿದೆ. ಶಿಕ್ಷಣದ ಹೊಸ ಸ್ವರೂಪವನ್ನು ನಿರ್ಮಿಸುವ ಮೂಲ ಗುರಿಯನ್ನು ಚಾಚೂತಪ್ಪದೆ ಪೂರೈಸುತ್ತದೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ. ಶಿಕ್ಷಣವೆಂದರೆ ಕೇವಲ ಓದು-ಬರಹ-ಲೆಕ್ಕಚಾರ ವಲ್ಲ. ಬದಲಿಗೆ ಶಿಕ್ಷಣವು ಸಾಮಾಜಿಕ-ಸಾಂಸ್ಕೃತಿಕ ಬೌದ್ಧಿಕ ಪರಿವರ್ತನೆಯ ಸಾಧನವಾಗಬೇಕು. ಕಲಿತ ನಂತರ ಸ್ವಾಭಿಮಾನಿ, ಸ್ವಾವಲಂಬಿ ಸಮಾಜದ ನಿರ್ಮಾಣಕ್ಕೆ ಕಟಿಬದ್ಧರಾಗಬೇಕು.

ಶಿಕ್ಷಣ ನೀತಿಯನ್ನು ದೇಶದಲ್ಲಿ ಮೊದಲು ಅನುಷ್ಠಾನಗೊಳಿಸುವಲ್ಲಿ ನಾವು ಚೊಚ್ಚಲ ಹೆಜ್ಜೆ ಇಡುತ್ತಿದ್ದೇವೆ ಎನ್ನುವುದಕ್ಕಿಂತ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸ್ವಾತಂತ್ರ್ಯ ನೀಡುವಲ್ಲಿ ಮತ್ತು ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ಕಟ್ಟುವಲ್ಲಿ ಮೊದಲ ಹೆಜ್ಜೆ ಇಡುತ್ತಿದ್ದೇವೆ ಎಂಬುದು ಹೆಚ್ಚು ಅರ್ಥಪೂರ್ಣ. ಈ ಎಲ್ಲಾ ಕಾರಣಗಳಿಂದ ಹೊಸ ಶಿಕ್ಷಣ ನೀತಿಯ ಬಗ್ಗೆ ಗೊಂದಲ ಉಂಟುಮಾಡಿದೆ ಇದನ್ನು ಟೀಕಿಸುವುದರ ಬದಲು ವಿದ್ಯಾರ್ಥಿ ಸ್ನೇಹಿ ನೀತಿಯನ್ನು ಬೆಂಬಲಿಸಬೇಕು. ಪ್ರಾದೇಶಿಕ ಮತ್ತು ರಾಷ್ಟ್ರ ಹಿತವನ್ನು ಮನದಟ್ಟು ಮಾಡಿಕೊಂಡು ಸಮಗ್ರ ಅಭಿವೃದ್ಧಿಗೆ ಪೂರಕ ಚಿಂತನೆ ಮಾಡಬೇಕೆಂಬುದು ನನ್ನ ಅಭಿಲಾಷೆ ಎಂದಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here