ಸಂಭ್ರಮ, ಸಡಗರದಿಂದ ಶಾಲೆಗೆ ಬಂದ 1ರಿಂದ 5ನೇ ತರಗತಿ ಮಕ್ಕಳು

0
244

ಚಿಕ್ಕಮಗಳೂರು : ಸರಿಸುಮಾರು ಒಂದೂವರೆ ವರ್ಷಗಳ ನಂತರ ಪೂರ್ಣ ಪ್ರಮಾಣದಲ್ಲಿ ಇಂದು ಶಾಲೆಗಳು ಆರಂಭಗೊಂಡಿವೆ.

ಕೊರೊನಾ ಹೆಮ್ಮಾರಿಯಿಂದ ಶಾಲೆಯಿಂದ ಪೂರ್ಣಪ್ರಮಾಣದಲ್ಲಿ ದೂರ ಉಳಿದಿದ್ದ ಮಕ್ಕಳು ಇಂದು ಶಾಲೆಗೆ ಬಂದಿದ್ದು ಎಲ್ಲಿ ನೋಡಿದಲ್ಲಿ ಮಕ್ಕಳದೇ ಕಲರವ.

ಮೇಲ್ಸ್ತರದಿಂದ ಹಂತ-ಹಂತವಾಗಿ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರಲು ಅನುವು ಮಾಡಿಕೊಟ್ಟಿದ್ದು ಕೊನೆಗೂ ಒಂದನೇ ತರಗತಿಯ ಮಕ್ಕಳಿಗೂ ಆ ಭಾಗ್ಯ ಪ್ರಾಪ್ತವಾಯಿತು.

ಶಾಲಾ ಕಟ್ಟಡ, ಆಟದ ಅಂಗಳ, ಪಾಠದ ಕೊಠಡಿ, ಶಿಕ್ಷಕರು ಎಲ್ಲದನ್ನೂ ಮತ್ತೆ ಕಣ್ತುಂಬಿಕೊಂಡ ಮಕ್ಕಳಲ್ಲಿ ಕಳೆದುಕೊಂಡದ್ದನ್ನು ಮತ್ತೆ ಪಡೆದ ಧನ್ಯತೆ ಕಾಣಿಸಿತು.

ಶಿಕ್ಷಕರು, ಮಕ್ಕಳ ಪರಸ್ಪರ ಭೇಟಿ ಶಾಲಾ ಆವರಣಕ್ಕೆ ಮೆರಗು ತಂದುಕೊಟ್ಟಿತು. ಪಂಜರದಿಂದ ಹೊರಬಂದ ಹಕ್ಕಿಗಳಂತೆ ಕುಣಿದಾಡಿದರು.

ಕೆಲ ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಹೂ, ಸಿಹಿ ತಿಂಡಿ ಕೊಟ್ಟು, ಹಾಡು ಹಾಡಿ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು. ಶಾಲೆಗೆ ಮಕ್ಕಳನ್ನು ಕಳಿಸುವ ಮೂಲಕ ಬಹಳಷ್ಟು ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಕಳೆದ ಒಂದೂವರೆ ವರ್ಷದಿಂದ ಮಕ್ಕಳನ್ನು ಹಿಡಿದಿಟ್ಟುಕೊಳ್ಳಲು ಅವರು ಪಟ್ಟ ಪಾಡು ಹೇಳತೀರದು. ಶಾಲೆಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಪಠ್ಯ ಪುಸ್ತಕಗಳು ಸರಬರಾಜಾಗಿದ್ದು ನವೆಂಬರ್ 1 ರ ಬಳಿಕ ಶಾಲೆಯ ಆವರಣ ಮತ್ತಷ್ಟು ರಂಗು ಪಡೆದುಕೊಳ್ಳಲಿದೆ.

ಜಾಹಿರಾತು

LEAVE A REPLY

Please enter your comment!
Please enter your name here