ಎದೆ ಭಾಗಕ್ಕೆ ತಿವಿದ ಕಾಡುಕೋಣ ; ವೃದ್ಧನ ಸ್ಥಿತಿ ಗಂಭೀರ !

0 50

ಕಳಸ: ಕಾಡುಕೋಣವೊಂದು ಎದೆ ಭಾಗಕ್ಕೆ ಬಲವಾಗಿ ತಿವಿದು ವೃದ್ಧನೊರ್ವ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಮುಜೇಖಾನ್ ಗ್ರಾಮದಲ್ಲಿ ನಡೆದಿದೆ.

ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಮರೀಗೌಡ (60) ಎಂದು ಗುರುತಿಸಲಾಗಿದೆ.

ಇವರು ಕಾಡಂಚಿನ ಗ್ರಾಮ ಮುಜೇಖಾನ್ ನಿಂದ ಕಳಸ ಕಡೆಗೆ ಬರುವಾಗ ದಾರಿ ಮಧ್ಯೆ ಇದ್ದ ಕಾಡುಕೋಣ ಏಕಾಏಕಿ ವೃದ್ಧನ ಮೇಲೆರಗಿದೆ. ಈ ವೇಳೆ ಕಾಡುಕೋಣದ ಕೊಂಬು ವೃದ್ಧ ಮರೀಗೌಡ ಅವರ ಎಡಭಾಗಕ್ಕೆ ಚುಚ್ಚಿ ಎದೆ ಭಾಗಕ್ಕೆ ಗಂಭೀರವಾದ ಗಾಯವಾಗಿದೆ. ಸ್ಥಳೀಯರು ಕೂಡಲೇ ಮರೀಗೌಡ ಅವರನ್ನು ಕಳಸ ಆಸ್ಪತ್ರೆಗೆ ಕರೆ ತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ತಪಾಸಣೆ ನಡೆಸಿದ ಆಸ್ಪತ್ರೆ ವೈದ್ಯೆ ಡಾ.ಮಾನಸ, ವೃದ್ಧನ ಶ್ವಾಸಕೋಶಕ್ಕೆ ಗಾಯವಾಗಿರುವುದನ್ನು ಗಮನಿಸಿದ್ದಾರೆ. ಸಂಬಂಧಿಕರು ವೃದ್ಧನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿಯಿಂದ ತತ್ತರಿಸಿರುವ ರೈತರು, ಸಾರ್ವಜನಿಕರು ಸದ್ಯ ಕಾಡು ಕೋಣಗಳ ಹಾವಳಿಯಿಂದ ಆತಂಕದಲ್ಲಿ ಬದುಕುವಂತಾಗಿದೆ. ಕಳೆದ ವರ್ಷ ಕಾಡುಕೋಣ ದಾಳಿಯಿಂದಾಗಿ ಕಳಸ ಸಮೀಪದ ತೋಟದೂರು ಎಂಬಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಕಾಡುಕೋಣಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಗತ್ಯ ಕ್ರಮವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಾಡುಪ್ರಾಣಿಗಳ ದಾಳಿಗೆ ಕಂಚಿನಕೆರೆ, ಮುಂಡಾನಿ, ಕಾಳಿಕೆರೆ, ಕೊಂಡದಮನೆ, ಗೊಡ್ಲುಮನೆ ಗ್ರಾಮಗಳ ಜನ ಕಂಗೆಟ್ಟಿದ್ದಾರೆ.

Leave A Reply

Your email address will not be published.

error: Content is protected !!