ಅಂತರಂಗ ಬಹಿರಂಗ ಶುದ್ಧಿಗೊಳಿಸುವುದೇ ಗುರುವಿನ ಧರ್ಮ ; ರಂಭಾಪುರಿ ಶ್ರೀಗಳು

0 524

ಭದ್ರಾವತಿ: ಬಾಳಿನ ಉನ್ನತಿ ಅವನತಿಗಳಿಗೆ ಮನಸ್ಸು ಮೂಲ. ಸುಖ ಬಯಸುವುದು ಮನುಷ್ಯನ ಸಹಜ ಗುಣ. ಅಂತರಂಗ ಮತ್ತು ಬಹಿರಂಗ ಇವೆರಡನ್ನು ಶುದ್ಧಿಗೊಳಿಸುವುದೇ ನಿಜವಾದ ಗುರುವಿನ ಧರ್ಮವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಶನಿವಾರ ತಾಲೂಕಿನ ಬಿಳಕಿ ಹಿರೇಮಠದಲ್ಲಿ ಲಿಂ.ಗುರುಸಿದ್ಧ ಶ್ರೀಗಳವರ ಮತ್ತು ರಾಚೋಟೇಶ್ವರ ಶ್ರೀಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯ ಎಷ್ಟು ವರುಷ ಬದುಕಿ ಬಾಳಿದರೂ ಒಂದಿಲ್ಲ ಒಂದು ದಿನ ಅಗಲದೇ ಬೇರೆ ದಾರಿಯಿಲ್ಲ. ಅರಿವಿನ ಜನ್ಮದಲ್ಲಿ ಹುಟ್ಟಿ ಆದರ್ಶ ಬದುಕನ್ನು ಕಟ್ಟಿಕೊಳ್ಳದಿದ್ದರೆ ಜೀವನ ವ್ಯರ್ಥವಾಗುತ್ತದೆ. ವ್ಯಕ್ತಿ ಜೀವನದಲ್ಲಿ ಸಂಪತ್ತು ಗಳಿಸದಿದ್ದರೂ ಪರವಾಯಿಲ್ಲ. ಆದರೆ ಸದ್ಗುಣಗಳನ್ನು ಬೆಳೆಸಿಕೊಂಡು ಬಾಳುವುದನ್ನು ಕಲಿಯಬೇಕಾಗುತ್ತದೆ. ವೀರಶೈವ ಧರ್ಮದಲ್ಲಿ ಅಂತರಂಗ ಮತ್ತು ಬಹಿರಂಗ ಶುದ್ಧಿಯಿಂದ ಜೀವನ ಉಜ್ವಲಗೊಳ್ಳಲು ಸಾಧ್ಯವಾಗುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಜೀವನ ಸಮೃದ್ಧಿಗೆ ಅಹಿಂಸಾದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರಗಳ ಪರಿಪಾಲನೆಯ ಅಗತ್ಯವಿದೆ. ಲಿಂಗೈಕ್ಯ ಉಭಯ ಶ್ರೀಗಳು ಧರ್ಮಮುಖಿಯಾಗಿ ಮತ್ತು ಸಮಾಜ ಮುಖಿಯಾಗಿ ಭಕ್ತ ಸಂಕುಲಕ್ಕೆ ಸಂಸ್ಕಾರ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಪೂರ್ವಜರ ಆದರ್ಶಗಳನ್ನು ಅನುಸರಿಸಿ ಇಂದಿನ ಪಟ್ಟಾಧ್ಯಕ್ಷರಾದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಶ್ರೀ ಮಠದ ಅಭಿವೃದ್ಧಿ ಮತ್ತು ಭಕ್ತರಿಗೆ ಸನ್ಮಾರ್ಗ ದರ್ಶನ ಕೊಡುತ್ತಿರುವುದು ತಮಗೆ ಸಂತಸ ತಂದಿದೆ ಎಂದರು.


ಸಮಾರಂಭ ಉದ್ಘಾಟಿಸಿದ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ ಮನುಷ್ಯ ಅಧಿಕಾರ ಅಂತಸ್ತು ಬೆನ್ನು ಹತ್ತಿ ಮನಸ್ಸಿನ ಶಾಂತಿ ಕಳೆದುಕೊಳ್ಳುತ್ತಿದ್ದಾನೆ. ಜೀವನ ಸಂವರ್ಧನೆಗೆ ಕಾರಣವಾಗಿರುವ ಪರಮ ಶಿವಜ್ಞಾನದ ಅರಿವನ್ನು ಸ್ವಲ್ಪಾದರೂ ಅರಿತು ಜೀವನ ನಡೆಸಿದರೆ ಸಾರ್ಥಕಗೊಳ್ಳುವುದು. ಸತ್ಯ ಧರ್ಮದತ್ತ ಕೊಂಡೊಯ್ಯುವ ಬಹು ದೊಡ್ಡ ಕಾರ್ಯವನ್ನು ಮಠಾಧೀಶರು ಮಾಡುತ್ತಾ ಬಂದಿದ್ದಾರೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಗುರುವಿನ ಮಾರ್ಗದರ್ಶನ ನಮ್ಮೆಲ್ಲರಿಗೆ ಆಶಾ ಕಿರಣವಾಗಿದೆ ಎಂದರು.


ಇದೇ ಸಂದರ್ಭದಲ್ಲಿ ಪುತ್ರವರ್ಗ ಪರಂಪರೆಯ ಶ್ರೀಮದ್ರಂಭಾಪುರಿ ಶಾಖಾ ಬಿಳಕಿ ಹಿರೇಮಠಕ್ಕೆ ಚಿದಾನಂದಸ್ವಾಮಿ – ಶಾಂಭವಿ ಇವರ ಸುಪುತ್ರ ಗುರುಪ್ರಸಾದ್ ವಟುವನ್ನು ರಾಚೋಟೇಶ್ವರ ಶ್ರೀಗಳು ನಿಯುಕ್ತಿಗೊಳಿಸಿ ಶ್ರೀ ರಂಭಾಪುರಿ ಜಗದ್ಗುರುಗಳಿಂದ ಅಶೀರ್ವಾದ ಮಾಡಿಸಿದ ಅವಿಸ್ಮರಣೀಯ ಘಟನೆ ಜರುಗಿತು.


ನೇತೃತ್ವ ವಹಿಸಿದ ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಇಂದಿನ ಕಲಿಕಾಲದಲ್ಲಿ ಅನ್ಯಾಯ ಅಸತ್ಯ ಹೇಳುವ ಜನರು ಹೆಚ್ಚಾಗುತ್ತಿದ್ದಾರೆ. ಹೀಗಾಗಿ ಸತ್ಯವಂತರು ಸುಮ್ಮನಿರುವ ಕಾಲ ಇದಾಗಿದೆ. ವಿಚಾರ ವಿಮರ್ಶೆಗಳು ಮಾನವ ಜೀವನದ ಉನ್ನತಿಗೆ ಕಾರಣವಾಗಬೇಕಲ್ಲದೇ ವಿನಾಶಕ್ಕಾಗಿ ಆಗಬಾರದು. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಬಲದಿಂದ ಶ್ರೀ ಮಠದ ಅಭಿವೃದ್ಧಿ ಮತ್ತು ಭಕ್ತರ ಭಾವನೆಗಳನ್ನು ಬೆಳೆಸುವತ್ತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವುದು ತಮಗೆ ತೃಪ್ತಿ ತಂದಿದೆ ಎಂದರು. ಶಿವಮೊಗ್ಗದ ಡಾ||ಧನಂಜಯ ಸರ್ಜಿ ಅವರು “ಆಹಾರ ಮತ್ತು ಆರೋಗ್ಯ” ಕುರಿತು ಸುದೀರ್ಘ ಉಪನ್ಯಾಸವನ್ನು ನೀಡಿದರು.


ಸಮಾರಂಭದ ಸಮ್ಮುಖ ವಹಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮತ್ತು ಹುಲಿಕೆರೆ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ವೀರಶೈವ ಧರ್ಮ ಸಂಸ್ಕೃತಿ ಮತ್ತು ಗುರು ಪರಂಪರೆಯ ಆದರ್ಶಗಳನ್ನು ವಿವರಿಸಿದರು. ಹೊನ್ನಾಳಿ ರಟ್ಟಿಹಳ್ಳಿ, ಹುಣಸಘಟ್ಟ, ತೊಗರ್ಸಿ ಹಿರೇಮಠ, ಚಿಕ್ಕಮಗಳೂರು, ಮಳಲಿ, ನಂದಿಪುರ ಮತ್ತು ಹಣ್ಣೆ ಮಠದ ಶ್ರೀಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು. ವೀರಶೈವ ಸಮಾಜದ ಧುರೀಣರಾದ ಟಿ.ವಿ.ಈಶ್ವರಯ್ಯ, ಎನ್.ಜೆ.ರಾಜಶೇಖರ, ರುದ್ರೇಶ್, ಸಿದ್ಧಲಿಂಗಯ್ಯ, ಬಿ.ಕೆ.ಮೋಹನ್ ಮೊದಲ್ಗೊಂಡು ಹಲವಾರು ಗಣ್ಯರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.

ಭದ್ರಾವತಿ ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಮನುಷ್ಯನಲ್ಲಿ ಒಳ್ಳೆಯ ಮತ್ತು ಕೆಟ್ಟ ಎರಡೂ ಗುಣಗಳು ಇವೆ. ಒಳಿತನ್ನು ಬೆಳೆಸುವುದೇ ಗುರುವಿನ ಧರ್ಮ. ಈ ದಿಶೆಯಲ್ಲಿ ಶ್ರೀ ಮಠದ ಶ್ರೀಗಳು ಮುನ್ನಡೆದು ಭಕ್ತರ ಬಾಳಿಗೆ ಬೆಳಕು ತೋರುತ್ತಿದ್ದಾರೆ ಎಂದರು. ಸಮಾರಂಭದ ನಿರೂಪಣೆಯನ್ನು ತಾವರೆಕೆರೆ ಡಾ.ಸಿದ್ಧಲಿಂಗ ಶಿವಾಚಾರ್ಯರು ನಿರ್ವಹಿಸಿದರು.


ಸಮಾರಂಭಕ್ಕೂ ಮುನ್ನ ಶ್ರೀ ಮಠದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಶುಭ ಹಾರೈಸಿದರು. ಆಗಮಿಸಿದ ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ನೆರವೇರಿತು.

Leave A Reply

Your email address will not be published.

error: Content is protected !!