ಸರ್ಕಾರಿ ಶಾಲೆಗಳ ಉಳಿವಿಗೆ ವಿದ್ಯಾವಂತ ಯುವಕರು ಮುಂದಾಗಬೇಕು ; ಅರಣ್ಯಾಧಿಕಾರಿ ರಾಘವೇಂದ್ರ

0 278

ಹೊಸನಗರ : ಪ್ರಸ್ತುತ ಕಾಲದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ಅತ್ಯಂತ ದಯನೀಯ ಪರಿಸ್ಥಿತಿಯಲ್ಲಿದ್ದು ಈ ಶಾಲೆಗಳನ್ನು ಉಳಿಸುವಲ್ಲಿ ವಿದ್ಯಾವಂತ ಯುವಕರು ಮುನ್ನಲೆಗೆ ಬರಬೇಕಾಗಿದೆ ಎಂದು ಹೊಸನಗರ ವಲಯ ಅರಣ್ಯಾಧಿಕಾರಿ ರಾಘವೇಂದ್ರ ರವರು ಹೇಳಿದರು.

ತಾಲೂಕಿನ ಮಾರುತಿಪುರ ಗ್ರಾಪಂ ವ್ಯಾಪ್ತಿಯ ಹೂವಿನಕೋಣೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪೋಸ್ಟ್ ಮ್ಯಾನ್ ಬಳಗದ ವತಿಯಿಂದ ಆಯೋಜಿಸಲಾಗಿದ್ದ “ಕನ್ನಡ ಶಾಲೆಯ ಅಭಿಮಾನ, ಸುಣ್ಣ ಬಣ್ಣದ ಅಭಿಯಾನ” ಕಾರ್ಯಕ್ರಮಕ್ಕೆ ಗೋಡೆಗೆ ಬಣ್ಣ ಹೊಡೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ಸರ್ಕಾರ ಶಾಲೆಗಳ ಸ್ಥಿತಿಗತಿಯ ಬಗ್ಗೆ ಚಿಂತನೆ ನಡೆಸಿ ಆಲೋಚಿಸುವ ಅಗತ್ಯವಿದೆ. ಸರ್ಕಾರಿ ಶಾಲೆಗಳು ಬಡ ಮಕ್ಕಳ ವಿದ್ಯಾರ್ಜನೆ ಕೇಂದ್ರಗಳಾಗಿವೆ. ಈ ಶಾಲೆಗಳ ಸಂರಕ್ಷಣೆ ಬಹುಸಂಖ್ಯಾತ ಜನರ ಅಭ್ಯಾಸಕ್ಕೆ ಪೂರಕವಾಗಿವೆ. ಆದರೆ ಸರ್ಕಾರಿ ಶಾಲೆಗಳ ಸ್ಥಿತಿ ಅತ್ಯಂತ ಗಂಭೀರವಾಗುತ್ತಿದೆ. ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಶಾಲೆಗಳಿಗೆ ಹೊಸ ಚೈತನ್ಯ ನೀಡಲು ವಿದ್ಯಾವಂತ ಯುವ ಸಮೂಹ ಮುಂದಾಗುವ ಮೂಲಕ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಯಾವುದರಲ್ಲೂ ಕಡಿಮೆಯಿಲ್ಲ ಎಂಬುವುದನ್ನು ಸಾಬೀತುಪಡಿಸಬೇಕಾಗಿದೆ ಎಂದರು.

ಸುಣ್ಣ-ಬಣ್ಣ ಅಭಿಯಾನಕ್ಕೆ ಚಾಲನೆ ನೀಡಿದ ಹೊಸನಗರ ಪಿಎಸ್‌ಐ ಶಿವಾನಂದ್ ಕೆ ಮಾತನಾಡಿ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಇರುವಷ್ಟು ಧೈರ್ಯ ಮತ್ತು ನೈತಿಕತೆ ಮತ್ಯಾರಿಗೂ ಇರಲು ಸಾಧ್ಯವಿಲ್ಲ. ಸರ್ಕಾರ ಶಾಲೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿದರೆ, ಮುಚ್ಚುವ ಸ್ಥಿತಿಯಲ್ಲಿರುವ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿಕೊಳ್ಳಬಹುದಾಗಿದೆ ಎಂದರು.

ಪೋಸ್ಟ್ ಮ್ಯಾನ್ ಬಳಗ ಆಯೋಜಿಸಿರುವ ಸರ್ಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ ಅಭಿಯಾನ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ. ಸರ್ಕಾರದ ನಾಲ್ಕನೇ ಅಂಗವಾಗಿರುವ ಪತ್ರಿಕಾ ವೃತ್ತಿಯಲ್ಲಿರುವ ಈ ಬಳಗದ ಸ್ನೇಹಿತರು ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಬಳಗದ ವತಿಯಿಂದ ಹೊಸನಗರ ತಾಲೂಕಿನ 21 ಶಾಲೆಗಳಿಗೆ ಉಚಿತವಾಗಿ ಸುಣ್ಣ-ಬಣ್ಣ ಮಾಡಿಕೊಡುವ ಅಭಿಯಾನದಲ್ಲಿ ಈಗಾಗಲೇ ಏಳು ಶಾಲೆಗಳಿಗೆ ಬಣ್ಣದ ರಂಗು ನೀಡಲಾಗಿದೆ. ಪೋಸ್ಟ್ ಮ್ಯಾನ್ ಬಳಗದ ಈ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಪೋಸ್ಟ್ ಮ್ಯಾನ್ ಸಂಸ್ಥೆಯ ರಫಿ ರಿಪ್ಪನ್‌ಪೇಟೆ, ಸಬಾಸ್ಟಿಯನ್, ಹಸನಬ್ಬ, ಸಚಿನ್ ಗೌಡ, ಎಸ್ಡಿಎಂಸಿ ಅಧ್ಯಕ್ಷ ರಮೇಶ್, ಶಾಲೆಯ ಮುಖ್ಯೋಪಾಧ್ಯಾಯ ತೀರ್ಥಕುಮಾರ್, ಶಿಕ್ಷಕರಾದ ಅಲ್ತಾಫ಼್ ಅಹಮದ್, ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು, ಎಸ್ ಡಿಎಂಸಿ ಸದಸ್ಯರೂ ಸೇರಿದಂತೆ ಗ್ರಾಮಸ್ಥರು ಇದ್ದರು.

Leave A Reply

Your email address will not be published.

error: Content is protected !!