ಸಾಗರದಲ್ಲಿ ಸಡಗರದಿಂದ ಸಂಪನ್ನಗೊಂಡ ಸಂವಿಧಾನ ಜಾಗೃತಿ ಐಕ್ಯತಾ ಜಾಥಾ

0 249

ಸಾಗರ: ಪ್ರವಾಸಿಗರ ಸ್ವರ್ಗ, ವಿಶ್ವ ಖ್ಯಾತಿಯ ಜೋಗ ಜಲಪಾತದ ನಾಡು, ಶ್ರೀಗಂಧದ ಕೆತ್ತನೆಯ ಪ್ರಸಿದ್ಧ ತಾಣ, ಐತಿಹಾಸಿಕ ಸಂಗ್ರಹಾಲಯವಿರುವ ಕೆಳದಿ, ಹೊಯ್ಸಳ ಶೈಲಿಯ ಕೆತ್ತನೆಯಿರುವ ಇಕ್ಕೇರಿ ಶರಾವತಿ ಹಿನ್ನಿರಿನ ಸುಂದರ ತಾಣ-ಹೊನ್ನೆಮರಡು, ಸಂಭ್ರಮದ ಮಾರಿಕಾಂಬ ಜಾತ್ರೆ ಉತ್ಸವ, ವರದಹಳ್ಳಿ, ಸಿಂಗಧೂರು, ಲಿಂಗನಮಕ್ಕಿ ಜಲಾಶಯ ಕೆ.ವಿ ಸುಬ್ಬಣ್ಣರವರು ಕಟ್ಟಿ-ಬೆಳಸಿದ ನೀನಾಸಂ, ಯಕ್ಷಗಾನ ಕಲಾ ಪ್ರಕಾರಗಳಿಗೆ ಪ್ರಸಿದ್ಧ ತಾಣ, ಅಡಿಕೆಯ ನಾಡು ಸಾಗರ.

ಹೀಗೆ ಭಾರತವನ್ನು ಕರ್ನಾಟಕದಲ್ಲಿ ನೋಡಬಹುದು ಎಂದಾದರೆ ಕರ್ನಾಟಕವನ್ನು ಸಾಗರದಲ್ಲೂ ನೋಡಬಹುದಾಗಿದೆ. ಇಂತಹ ವೈವಿಧ್ಯಮಯ ಐತಿಹ್ಯದ ಸಾಗರ ತಾಲ್ಲೂಕಿಗೆ ಸಂವಿಧಾನವನ್ನು ಪರಿಚಯಿಸುವ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮ “ಸಂವಿಧಾನ ಜಾಗೃತಿ ಜಾಥಾ” ಫೆಬ್ರವರಿ 05 ರಂದು ಪವಗೋಡು ಗ್ರಾಮ ಪಂಚಾಯಿತಿಯನ್ನು ಪ್ರವೇಶಿಸಿತು.

ಸಾಗರ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳಾದ ಸುರೇಶ್ ಸಹಾನೆ ಮತ್ತು ಇತರೆ ಅಧಿಕಾರಿಗಳು, ಸಿಬ್ಬಂದಿಗಳು ಪವಗೋಡು ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ವಿವಿಧ ಸ್ತ್ರೀ ಶಕ್ತಿ ಸಂಘಗಳಿಂದ ಆಗಮಿಸಿದ ಮಹಿಳೆಯರಿಂದ ಪೂರ್ಣ ಕುಂಭ ಸ್ವಾಗತ, ವಿದ್ಯಾರ್ಥಿಗಳಿಂದ ಜೈಕಾರ ಹಾಗೂ ರಾಜ ಬೀದಿ ಉತ್ಸವದೊಂದಿಗೆ ಚಲಿಸಿ ಜನಸಾಮಾನ್ಯರ ಅಭೂತ ಪೂರ್ವ ಸ್ವಾಗತದೊಂದಿಗೆ ಮುಂದುವರೆದು ಗ್ರಾಮ ಪಂಚಾಯಿತಿಗಳಾದ ನಾಡಕಲಸಿ, ಭೀಮನೇರಿ, ಕಲ್ಮನೆ, ಅವಿನಹಳ್ಳಿ, ತ್ಯಾಗರ್ತಿ ಹೊಸೂರು, ಯಡೇಹಳ್ಳಿ ಮಾಸೂರು, ಹಿರೆನಲ್ಲೂರು, ಉಳ್ಳೂರು, ಗೌತಮಪುರ ಹೀಗೆ ಎಲ್ಲಾ 38 ಪಂಚಾಯಿತಿಗಳಲ್ಲಿ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಸಂವಿಧಾನದ ಮೂಲ ಆಶಯಗಳನ್ನು ಹೊತ್ತ ಐಕ್ಯತ ಜಾಥಾ ಸಂಚರಿಸಿತು.

ಸಾಗರದ ಜನರ ಹೃದಯ ವೈಶಾಲ್ಯತೆ ಸಾಗರದಷ್ಟೇ ದೊಡ್ಡದು ಎನ್ನುವಂತೆ ಫೆಬ್ರವರಿ 05 ರಿಂದ 12 ರವರೆಗೆ ಒಟ್ಟು 07 ದಿನಗಳ ಕಾಲ ನಡೆದ ಜಾಥಾದಲ್ಲಿ ಪ್ರತಿ ಪಂಚಾಯಿತಿಗಳಲ್ಲಿ ಪೂರ್ಣ ಕುಂಭ ಸ್ವಾಗತ, ಎತ್ತಿನ ಗಾಡಿ, ಮೆರವಣಿಗೆ, ಬೈಕ್ ಆಟೋ ರ್ಯಾಲಿಗಳಲ್ಲಿ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಹಾಡು, ಕವನ ವಾಚನ, ನಾಟಕ ಪ್ರದರ್ಶನ, ಡೊಳ್ಳು ಕುಣಿತದೊಂದಿಗೆ ಜಾಥಾ ಕಾರ್ಯಕ್ರಮನ್ನು ಯಶಸ್ವಿಗೊಳಿಸಲಾಯಿತು.

ವಿಶ್ವದ ಅತ್ಯಂತ ವಿಸ್ತಾರ ಲಿಖಿತ ಸಂವಿಧಾನ ನಮ್ಮದು. ದೇಶದ ಪ್ರತಿ ಪ್ರಜೆಯು ಸಂವಿಧಾನದ ಚೌಕಟ್ಟಿನಲ್ಲಿ ಸಮಾನರು, ಹಲವಾರು ದೇಶದ ಸಂವಿಧಾನಗಳನ್ನು ಅಧ್ಯಯನ ನಡೆಸಿ ಜನತೆಯ ಸಾರ್ವಭೌಮತೆ, ಪ್ರಜಾತಾಂತ್ರಿಕ ಪ್ರಾಧ್ಯಾನ್ಯತೆ, ಕಠಿಣತೆ ಮತ್ತು ಮೃದುತ್ವದ ಸಮ್ಮಿಲನ, ಸಮಾಜವಾದ, ಜಾತ್ಯಾತೀತತೆ, ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು ಹೀಗೆ ದೇಶದ ಸಂಸ್ಕೃತಿ ನಡೆ, ನುಡಿ ಜೀವನ ಶೈಲಿ ಅನುಗುಣವಾಗಿ ಸಂವಿಧಾನದ ಪ್ರತಿ ಕಲಂಗಳನ್ನು ರಚಿಸಲಾಗಿದೆ.

ಇಂತಹ ಸಂವಿಧಾನದ ಆಶಯಗಳನ್ನೊತ್ತ ಎರಡು ಟ್ಯಾಬ್ಲೋಗಳು ಸಾಗರದಾದ್ಯಂತ ಸಂಚರಿಸಿ ಸಂವಿಧಾನ ಮತ್ತು ಐಕ್ಯತಾ ಜಾಥಾ ನಡೆಸುತ್ತಾ ಹೊಸನಗರ ತಾಲ್ಲೂಕನ್ನು ಪ್ರವೇಶಿಸಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಯವರು ವಿದ್ಯಾರ್ಥಿಗಳು, ಸಮಾಜ ಕಲ್ಯಾಣ ಇಲಾಖೆ ಮತ್ತು ಇತರೆ ಇಲಾಖಾ ಅಧಿಕಾರಿಗಳ ಸಿಬ್ಬಂದಿಗಳ ಪರಿಶ್ರಮ ಮತ್ತು ಬದ್ಧತೆಯಿಂದ “ಸಂವಿಧಾನ ಜಾಗೃತಿ ಜಾಥಾವು ಸಾಗರದಲ್ಲಿ ಅತ್ಯಂತ ಯಶಸ್ವಿಯಾಗಿರುವುಕ್ಕೆ ಬಹಳ ಸಂತೋಷವಿದೆ ಹಾಗೂ ಸಾಗರ ತಾಲ್ಲೂಕಿನ ಸಮಸ್ತ ಜನತೆಗೆ ವಂದನೆಗಳನ್ನು ತಿಳಿಸುತ್ತಿದ್ದೇನೆ.
– ಮಲ್ಲೇಶಪ್ಪ.ಡಿ, ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ

Leave A Reply

Your email address will not be published.

error: Content is protected !!