5 ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ರೆವಿನ್ಯೂ ಇನ್ಸ್‌ಪೆಕ್ಟರ್

0 25

ಶಿವಮೊಗ್ಗ : ಲಂಚ ಸ್ವೀಕರಿಸುವಾಗ ರೆವಿನ್ಯೂ ಇನ್ಸ್‌ಪೆಕ್ಟರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ನಡೆದಿದೆ. ಮಹಾನಗರ ಪಾಲಿಕೆಯ ಮಂಜುನಾಥ್ ಲೋಕಾಯುಕ್ತರ ಬಲೆಗೆ ಬಿದ್ದ ಆರ್.ಐ.

ಘಟನಾ ವಿವರ :

ಶಿವಮೊಗ್ಗದ ವಡ್ಡಿನಕೊಪ್ಪದ 1ನೇ ಕ್ರಾಸ್‌ ನ ವ್ಯವಸಾಯ ವೃತ್ತಿಯ ಹಾಲೇಶ್ ಕುಮಾರ್ ಆರ್. ಬಿನ್ ರಂಗಸ್ವಾಮಿ ಆರ್. (47) ಇವರು ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ವಡ್ಡಿನಕೊಪ್ಪ ವಾರ್ಡ್ ನಂಬರ್ 14 ರಲ್ಲಿ ತನ್ನ ತಂದೆ ರಂಗಸ್ವಾಮಿ ಆರ್ ಬಿನ್ ರಂಗಪ್ಪ ರವರ ಹೆಸರಿನಲ್ಲಿ 39X106 ಒಟ್ಟು 4134 ಚದರ ಅಡಿ ವಿಸ್ತೀರ್ಣದ ಖಾಲಿ ನಿವೇಶನ ಇರುತ್ತದೆ. ಈ ನಿವೇಶನದಲ್ಲಿ ತಾನು ಹೊಸದಾಗಿ ಮನೆ ನಿರ್ಮಾಣ ಮಾಡುವ ಉದ್ದೇಶದಿಂದ ಶಿವಮೊಗ್ಗ ಮಹಾನಗರ ಪಾಲಿಕೆಗೆ ಕಟ್ಟಡ ಪರವಾನಿಗೆ ನೀಡಲು ಕೋರಿ ದಿನಾಂಕ:22-02-2023 ರಂದು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿದ್ದು ಇವರು ತಮ್ಮ ವಾರ್ಡ್‌ನ ರಾಜಸ್ವ ನಿರೀಕ್ಷಕ ಮಂಜುನಾಥ್ ರವರನ್ನು ಭೇಟಿ ಮಾಡಿ ನಿವೇಶನಕ್ಕೆ ಸಂಬಂಧಿಸಿದ ವರದಿ ನೀಡಲು ಹಲವಾರು ಬಾರಿ ಕೇಳಿಕೊಂಡಿದ್ದು, ಅವರು ಕಳುಹಿಸುತ್ತೇನೆ ಹೋಗು ಎಂದು ನಿರ್ಲಕ್ಷ್ಯದಿಂದ ಹೇಳುತ್ತಿದ್ದರು.


ಮಂಜುನಾಥ್ ರವರು ವರದಿಯನ್ನು ನೀಡದೆ ಸತಾಯಿಸುತ್ತಿದ್ದರಿಂದ ಹಾಲೇಶ್ ಕುಮಾರ್ ದಿನಾಂಕ:-06-04-2023 ರಂದು ಸಂಜೆ ಮಹಾನಗರ ಪಾಲಿಕೆ ಹೋಗಿ ಆರ್‌.ಐ ಮಂಜುನಾಥ್ ರವರನ್ನು ಭೇಟಿ ಮಾಡಿದ್ದು, ಆಗ ಆರ್‌ಐರವರು ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು, ಈ ಸಂಭಾಷಣೆಯನ್ನು ವಾಯ್ಸ್ ರೆಕಾರ್ಡ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು.

ಇಂದು ಲೋಕಾಯುಕ್ತ ಕಛೇರಿ ಶಿವಮೊಗ್ಗಕ್ಕೆ ವಾಯ್ಸ್
ರೆಕಾರ್ಡ್‌ನೊಂದಿಗೆ ಹಾಜರಾಗಿ ಮಂಜುನಾಥ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿದ್ದರು.

ಅದರಂತೆ ಮಂಜುನಾಥ ಆರ್. ಬಿನ್ ರಂಗಪ್ಪ, ರಾಜಸ್ವ ನಿರೀಕ್ಷಕರು, ಕಂದಾಯ ವಿಭಾಗ, ಮಹಾನಗರ ಪಾಲಿಕೆ ಕಛೇರಿ, ಶಿವಮೊಗ್ಗ ಕಛೇರಿ ಆವರಣದಲ್ಲಿರುವ ತಾತ್ಕಾಲಿಕವಾಗಿ ನಿರ್ಮಿಸಿರುವ ಎಸ್‌ಎಸ್ (ಆಸ್ತಿ ತೆರಿಗೆ ಪಾವತಿ ಸಂಬಂಧ ಚಲನ್ ನೀಡುವ ಕೌಂಟರ್) ಕೊಠಡಿಯಲ್ಲಿ ಹಾಲೇಶ್ ಕುಮಾರ್ ರವರಿಂದ ಲಂಚದ ಹಣ 5,000 ರೂ. ಪಡೆಯುತ್ತಿರುವ ಸಂದರ್ಭದಲ್ಲಿ ಟ್ರ್ಯಾಪ್ ಮಾಡಲಾಗಿದೆ.

ಮಂಜುನಾಥ್ ರನ್ನು ಬಂಧಿಸಿ ಮುಂದಿನ ತನಿಖೆಯನ್ನು ಹೆಚ್. ಎಂ. ಜಗನ್ನಾಥ, ಪೊಲೀಸ್ ನಿರೀಕ್ಷಕರು, ಕ.ಲೋ, ಶಿವಮೊಗ್ಗ ಇವರು ಕೈಗೊಂಡಿದ್ದು ಕರ್ನಾಟಕ ಲೋಕಾಯುಕ್ತ ಚಿತ್ರದುರ್ಗ ಕಛೇರಿ ಪೊಲೀಸ್ ಅಧೀಕ್ಷಕರಾದ ಎನ್. ವಾಸುದೇವರಾಮ ಮತ್ತು ಉಮೇಶ ಈಶ್ವರ ನಾಯ್ಕ ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ಇವರ ಮಾರ್ಗದರ್ಶನದಲ್ಲಿ ಪ್ರಕರಣವನ್ನು ದಾಖಲಿಸಿ ಆರೋಪಿಯನ್ನು
ಬಂಧಿಸಲಾಗಿದೆ.

ಟ್ರ್ಯಾಪ್ ಕಾಲಕ್ಕೆ ಶಿವಮೊಗ್ಗ ಲೋಕಾಯುಕ್ತ ಕಛೇರಿಯ ಪೊಲೀಸ್ ಸಿಬ್ಬಂದಿಗಳಾದ ಪ್ರಸನ್ನ, ಬಿ. ಲೋಕೇಶಪ್ಪ, ವಿ.ಎ ಮಹಂತೇಶ, ಪ್ರಶಾಂತ್ ಕುಮಾರ್, ರಘುನಾಯ್ಕ, ಸುರೇಂದ್ರ, ಅರುಣ್ ಕುಮಾರ್, ದೇವರಾಜ್, ಪುಟ್ಟಮ್ಮ, ಸಾವಿತ್ರಮ್ಮ, ಗಂಗಾಧರ, ಪ್ರದೀಪ್, ತರುಣ್ ಕುಮಾರ್, ಜಯಂತ್ ಇವರುಗಳು ಹಾಜರಿದ್ದರು.

Leave A Reply

Your email address will not be published.

error: Content is protected !!