Ripponpet | ಕಾಡಾನೆ ಉಪಟಳಕ್ಕೆ ಬೇಸತ್ತ ರೈತರು !

0 1,654

ರಿಪ್ಪನ್‌ಪೇಟೆ: ಕೆಂಚನಾಲ (Kenchanala) ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದೊಂದು ವಾರದಿಂದ ಬೀಡುಬಿಟ್ಟಿರುವ ಕಾಡಾನೆಗಳ (Elephants) ಉಪಟಳಕ್ಕೆ ಈ ಭಾಗದ ರೈತರು (Farmers) ಹೈರಾಣಾಗಿದ್ದಾರೆ.


ಆಲವಳ್ಳಿ, ಮಾದಾಪುರ, ಕಲ್ಯಾಣಪುರ, ಕಮದೂರು ಗ್ರಾಮಗಳ ರೈತರ ಹೊಲ-ಗದ್ದೆಗಳಿಗೆ ನಿತ್ಯ ಆನೆಗಳು ನಿರಂತರ ದಾಳಿ ಮಾಡುತ್ತಿದ್ದು, ಈಗಾಗಲೇ ಮಲ್ಲಿಕಾರ್ಜುನ, ರಾಜೇಶ, ಕುಮಾರಗೌಡ, ಲಿಂಗಪ್ಪ, ಕೀರ್ತಿರಾಜ ಎಂಬ ರೈತರುಗಳ ಲಕ್ಷಾಂತರ ರೂಪಾಯಿಯ ಬೆಳೆಗಳನ್ನು ನಷ್ಟಗೊಳಿಸಿದ್ದು ಅಳಿದುಳಿದ ಬೆಳೆಯನ್ನು ಉಳಿಸಿಕೊಳ್ಳುವಲ್ಲಿ ರೈತರು ಅಸಹಾಯಕರಾಗಿದ್ದಾರೆ.

ರಾತ್ರಿಯಾಗುತ್ತಿದ್ದಂತೆ ಭತ್ತ, ಬಾಳೆ, ಶುಂಠಿ, ಕಬ್ಬು, ಅಡಿಕೆ, ಹೊಲ-ಗದ್ದೆಗಳಿಗೆ ನುಗ್ಗುತ್ತಿರುವ ಕಾಡಾನೆಗಳು ಒಂದಿಷ್ಟನ್ನು ತಿಂದು, ಉಳಿದ ಫಸಲನ್ನು ತುಳಿದು ನಾಶಗೊಳಿಸುತ್ತಿವೆ. ವರ್ಷಗಟ್ಟಲೇ ಕಷ್ಟಪಟ್ಟು ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲಾಗದೆ, ಆನೆಗಳನ್ನು ಓಡಿಸಲಾಗದೆ ಅಸಹಾಯಕರಾಗಿರುವ ರೈತರು ಅನಿವಾರ್ಯವಾಗಿ ಅರಣ್ಯ ಇಲಾಖೆಯ ಮೊರೆ ಹೋಗುತ್ತಿದ್ದಾರೆ.
ಇಲಾಖಾ ಸಿಬ್ಬಂದಿಗಳು ಸ್ಥಳಪರಿಶೀಲನೆ ನಡೆಸುವುದರೊಂದಿಗೆ ಆನೆಗಳನ್ನು ಬೇರೆಡೆ ಬೆನ್ನಟ್ಟುವ ಭರವಸೆಯನ್ನು ನೀಡುತ್ತಿದ್ದಾರೆ. ಚೋರಡಿ, ಅರಸಾಳು, ಮೂಗುಡ್ತಿ ಅರಣ್ಯ ವಲಯಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆಯೊಂದಿಗೆ ಆನೆಗಳ ಇರುವಿಕೆಯ ಪತ್ತೆ ಹಚ್ಚಲು ಕೊಂಬಿಂಗ್ ನಡೆಸುತ್ತಿದ್ದಾರೆ. ಆದರೆ ಮಂಗಳವಾರ ರಾತ್ರಿ ಈಟಿಕೆರೆ ರೈತ ಕೀರ್ತಿರಾಜ್‌ರವರ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಬಾಳೆ, ಅಡಿಕೆ ಮರಗಳನ್ನು ನಾಶಪಡಿಸಿರುವುದು ಬೆನ್ನಟ್ಟುವ ಕಾರ್ಯಾಚರಣೆಗೆ ಸವಾಲೆಸೆದಿವೆ.

ಹಗಲು ಹೊತ್ತಿನಲ್ಲಿ ಹೇಗೋ ಸಾವರಿಸಿಕೊಂಡು ದೈನಂದಿನ ವಹಿವಾಟು ನಡೆಸುತ್ತಿರುವ ರೈತರು ಸಂಜೆಯಾಗುತ್ತಿದ್ದಂತೆ ಆನೆಗಳ ದಾಳಿಯ ನೀರೀಕ್ಷೆಯಿಂದ ಆತಂಕಗೊಂಡು ಪಟಾಕಿ ಸಿಡಿಮದ್ದುಗಳನ್ನು ಸಿಡಿಸುವುದು, ಆಯಕಟ್ಟಿನ ಸ್ಥಳಗಳಲ್ಲಿ ಬೆಂಕಿ ಹಾಕಿಕೊಂಡು ಬೆಳೆಗಳ ಕಾವಲು ಮಾಡಿಕೊಳ್ಳುವುದೇ ಸಂಕಷ್ಟಕ್ಕೆ ಎಡೆಮಾಡಿದೆ.

ಅತಿಸೂಕ್ಷ್ಮ ಮತಿಯಾಗಿರುವ ಆನೆಯಿಂದ ಬೆಳೆ ಹಾಗೂ ಜೀವ ರಕ್ಷಣೆ ಮಾಡಿಕೊಳ್ಳುವುದು ರೈತರಿಗೆ ಅಪಾಯಕರವಾಗಿದ್ದು ಆಡಳಿತ ವರ್ಗ ಮತ್ತು ಇಲಾಖೆ ಅಧಿಕಾರಿಗಳು ಜನರ ನೆರವಿಗೆ ಧಾವಿಸಬೇಕಿದೆ.

“ಕಳೆದೊಂದು ವಾರದಿಂದ ಹಗಲು ರಾತ್ರಿಯೆನ್ನದೇ ಬೆಳೆಗಳ ಕಾವಲು ಮಾಡುತ್ತಿದ್ದೇವೆ. ಆದರೂ ಸಹಿತ ಹಲವು ರೈತರ ಬೆಳೆಗಳನ್ನು ಆನೆಗಳು ಧ್ವಂಸ ಮಾಡಿವೆ. ಬದುಕಿನ ಮೂಲಾಧಾರವಾಗಿರುವ ಬೆಳೆಗಳನ್ನು ಕಳೆದುಕೊಂಡು ಜೀವನ ಕಷ್ಟಕರವಾಗಿದೆ. ಇಲಾಖೆಯವರು ಜನರಿಗೆ ಪ್ರಾಣಹಾನಿಯಾಗುವ ಮೊದಲೆ ಎಚ್ಚೆತ್ತುಕೊಂಡು ಆನೆಗಳನ್ನು ಬೇರೆಡೆ ಸಾಗಿಸಲಿ, ಇಲ್ಲದಿದ್ದರೆ ಇನ್ನೊಂದೆರಡು ದಿನಗಳಲ್ಲಿ ಈ ಭಾಗದ ಸಾರ್ವಜನಿಕರೊಂದಿಗೆ ಅರಣ್ಯ ಇಲಾಖೆ ಕಚೇರಿ ಎದುರು ಧರಣಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ”.
– ಕೀರ್ತಿರಾಜ್, ಬೆಳೆ ಹಾನಿಯಾದ ರೈತ

“ಚೋರಡಿ, ಮೂಗುಡ್ತಿ, ಅರಸಾಳು ವಲಯ ಅರಣ್ಯಾಧಿಕಾರಿಗಳು ಆನೆಯನ್ನು ಹಿಮ್ಮೆಟ್ಟಿಸುವ ಜಂಟಿ ಕಾರ್ಯಾಚರಣೆ ಮಾಡುತ್ತಿದ್ದೇವೆ. ಹಾಗೂ ದ್ರೋಣ್ ಕ್ಯಾಮೆರಾದ ಮೂಲಕ ಆನೆಗಳ ಜಾಡನ್ನು ಪತ್ತೆ ಹಚ್ಚುವ ಕಾರ್ಯವೂ ಸಾಗಿದೆ. ಕಾಡಿನಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದೇವೆ. ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಿ ಶೀಘ್ರದಲ್ಲಿಯೇ ಆನೆಗಳನ್ನು ಹಿಮ್ಮೆಟ್ಟಿಸುತ್ತೇವೆ”.
– ಬಾಬು ರಾಜೇಂದ್ರ ಪ್ರಸಾದ್, ಅರಸಾಳು ಆರ್‌ಎಫ್‌ಓ


ರಿಪ್ಪನ್‌ಪೇಟೆಯಲ್ಲಿ ಡಿ. 8 ರಂದು ಗ್ರಾಮಸಭೆ
ರಿಪ್ಪನ್‌ಪೇಟೆ: ಪಟ್ಟಣದ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಡಿ. 8 ರ ಶುಕ್ರವಾರ 11 ಗಂಟೆಗೆ ಗ್ರಾ.ಪಂ.ಅಧ್ಯಕ್ಷೆ ಧನಲಕ್ಷ್ಮಿ ರವರ ಅಧ್ಯಕ್ಷತೆಯಲ್ಲಿ ಹೊಸನಗರ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಪುಟ್ಟನಾಯ್ಕ ಉಪಸ್ಥಿತಿಯಲ್ಲಿ ಗ್ರಾಮಸಭೆ ನಡೆಸಲಾಗುವುದೆಂದು ಪಿಡಿಒ ಮಧುಸೂದನ್ ಪ್ರಕರಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!