ದೂಗೂರು ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

0 36

ಸೊರಬ: ತಾಲೂಕಿನ ದೂಗೂರು ಗ್ರಾಮ ಪಂಚಾಯ್ತಿಗೆ ಗುರುವಾರ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಫಯಾಜ್ ಅಹ್ಮದ್ ಅಧ್ಯಕ್ಷರಾಗಿ ಹಾಗೂ ಗಂಗಮ್ಮ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

8 ಸದಸ್ಯರ ಬಲ ಇರುವ ಪಂಚಾಯ್ತಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಅನುಸೂಚಿತ ಜಾತಿಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಫಯಾಜ್ ಅಹ್ಮದ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗಂಗಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತೋಟಗಾರಿಕಾ ಇಲಾಖೆಯ ಸಹಾಯಕ ತೋಟಗಾರಿಕಾ ಅಧಿಕಾರಿ ಕೆ.ಎಂ. ನಾಗರಾಜ್ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು. ಗ್ರಾಪಂ ಪಿಡಿಒ ಸಿ.ಕೆ. ನಾಗರಾಜ್ ಹಾಗೂ ಸಹಾಯಕ ಕಾರ್ಯದರ್ಶಿ ನಂದಿನಿ ಸಹಕರಿಸಿದರು. ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ತಾಪಂ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಎಚ್. ಗಣಪತಿ ಮಾತನಾಡಿ, ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಅವರು ಶಾಸಕರಾಗಿ ಸಚಿವರಾಗಿತ್ತಿದ್ದಂತೆ ಕಾಂಗ್ರೆಸ್ ಬಗ್ಗೆ ಉತ್ತಮ ವಾತಾವರಣ ನಿರ್ಮಾಣವಾಗಿದೆ. ತಾಲೂಕಿನಲ್ಲಿ ಸುಮಾರು 25 ಗ್ರಾಪಂಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ದೂಗೂರು ಗ್ರಾಪಂ ನಲ್ಲಿ ಫಯಾಜ್ ಅಹ್ಮದ್ ಅವರ ಜನಸೇವೆಯನ್ನು ಜನತೆ ಮೆಚ್ಚಿದ್ದಾರೆ. ಮಧು ಬಂಗಾರಪ್ಪ ಅವರೇ ಸಚಿವರಾಗಿರುವುದರಿಂದ ಮತ್ತಷ್ಟು ಅಭಿವೃದ್ಧಿ ಕಾರ್ಯಗಳ ಹಮ್ಮಿಕೊಳ್ಳಲು ಅನುಕೂಲವಾಗಲಿದೆ ಎಂದರು.

ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ ಮಾತನಾಡಿ, ಮಧು ಬಂಗಾರಪ್ಪ ಅವರು ಸಚಿವರಾದ ತರುವಾಯ ಪಕ್ಷ ಕ್ಷೇತ್ರದಲ್ಲಿ ಬಲಿಷ್ಠವಾಗುತ್ತಿದೆ. ಗ್ರಾಪಂ ಚುನಾವಣೆಗಳಲ್ಲಿ ಬಹುತೇಕ ಕಾಂಗ್ರೆಸ್ ಬೆಂಬಲಿತರು ಅಧ್ಯಕ್ಷಗಾದಿ ಏರುತ್ತಿದ್ದಾರೆ. ಮುಂಬರುವ ತಾಪಂ‌ ಮತ್ತು ಜಿಪಂ ಚುನಾವಣೆಗೆ ಇದು‌ ದಿಕ್ಸೂಚಿಯಾಗಿದೆ ಎಂದರು.

ದೂಗೂರು ಗ್ರಾಪಂ ನೂತನ ಅಧ್ಯಕ್ಷ ಫಯಾಜ್ ಅಹ್ಮದ್ ಮಾತನಾಡಿ, ಪಂಚಾಯ್ತಿ ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ತಮಗೆ ಅಧ್ಯಕ್ಷ ಸ್ಥಾನ ಲಭಿಸಲು ಕಾರಣೀಕರ್ತರಾದ ಸಚಿವ ಎಸ್. ಮಧು ಬಂಗಾರಪ್ಪ, ಪಕ್ಷದ ಮುಖಂಡರು ಹಾಗೂ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.‌

ಗ್ರಾಪಂ ಸದಸ್ಯರಾದ ಎಂ.ಬಿ. ಪುಟ್ಟಪ್ಪ, ಡಿ.ಸಿ. ನಟರಾಜ, ಎಸ್. ಲೋಕೇಶ್, ಗೌರಮ್ಮ, ಶಶಿಕಲಾ, ತುಳಸಿ, ಮುಖಂಡರಾದ ಕೆ.ವಿ. ಗೌಡ, ನಾಗರಾಜ ಚಿಕ್ಕಸವಿ, ಅಶೋಕ ಹೆಗಡೆ, ರವಿ ಬರಗಿ, ಪ್ರಭು ಶಿಗ್ಗಾ, ಪ್ರೇಮಾ ಉಳವಿ, ಸುಜಾಯತ್ ವುಲ್ಲಾ, ಜಗದೀಶ್ ಕುಪ್ಪೆ, ಕೆ.ಎಚ್. ಬೈರಪ್ಪ ಮೈಸಾವಿ, ಕುಮಾರ್ ಕಣ್ಣೂರು, ಚಂದ್ರಪ್ಪ, ಚೌಡಪ್ಪ, ಗಣಪತಿ‌ ಮೈಸಾವಿ, ಪರಮೇಶ್, ಪ್ರಶಾಂತ್ ಕೈಸೋಡಿ, ರವಿ ಮಳಲಗದ್ದೆ, ಏಜಾಸ್ ಆಹ್ಮದ್, ಸೇರಿದಂತೆ ಮತ್ತಿತರರಿದ್ದರು.

Leave A Reply

Your email address will not be published.

error: Content is protected !!