100 ರೂ. ಬಾಡಿಗೆಗೆ ಬಂದು 6 ಸಾವಿರ ರೂ. ಖರ್ಚು ಮಾಡಿದ ಆಟೋ ಚಾಲಕ !!

0
7647

ಚಿಕ್ಕಮಗಳೂರು: ನೂರು ರೂಪಾಯಿ ಆಟೋ ಬಾಡಿಗೆಗೆ ಬಂದಿದ್ದ ಆಟೋ ಚಾಲಕ ತನ್ನ ಆಟೋವನ್ನು ರಕ್ಷಿಸಿಕೊಳ್ಳಲು ಆರು ಸಾವಿರ ರೂಪಾಯಿ ಹಣವನ್ನು ಸಾಲ ಮಾಡ ಬೇಕಾದಂತಹ ಕರುಣಾಜನಕ ಘಟನೆ ನಗರದಲ್ಲಿ ನಡೆದಿದೆ.

ಜಿಲ್ಲಾಡಳಿತ, ಮುಕ್ತ ವಿಶ್ವವಿದ್ಯಾನಿಲಯಕ್ಕೆ ಪರಿಪರಿಯಾಗಿ ಬೇಡಿಕೊಂಡರು ಯಾರೂ ಸಹಾಯ ಮಾಡದ ಹಿನ್ನೆಲೆ ಕೊನೆಗೆ ತನ್ನ ಆಟೋವನ್ನು ರಕ್ಷಿಸಲು ತಾನೇ ಆರು ಸಾವಿರ ರೂಪಾಯಿ ಸಾಲ ಮಾಡಿ ರಕ್ಷಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ನಗರದಲ್ಲಿ ಬುಧವಾರ ರಾತ್ರಿ ಭಾರೀ ಮಳೆ ಸುರಿದಿತ್ತು. ಭಾರೀ ಮಳೆಯಿಂದ ನಗರದ ಮಧುವನ ಲೇಔಟ್‍ನಲ್ಲಿರುವ ಮುಕ್ತ ವಿಶ್ವವಿದ್ಯಾಲಯದ ಗೇಟ್ ಬಳಿಯ ಸೇತುವೆ ಕುಸಿದಿತ್ತು. ಇದರಿಂದ ಪರೀಕ್ಷೆ ಬರೆಯಲು ಬಂದಿದ್ದ ಸುಮಾರು 40 ವಿದ್ಯಾರ್ಥಿಗಳು ಹೊರಬರಲು ಜಾಗವಿಲ್ಲದೇ ಅಲ್ಲೇ ಲಾಕ್ ಆಗಿದ್ದರು. ವಿಷಯ ತಿಳಿದ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಸಿಬ್ಬಂದಿ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿತ್ತು. ಆದರೆ, ವಿದ್ಯಾರ್ಥಿಗಳನ್ನು ಕರೆತಂದಿದ್ದ ಆಟೋ ಮಾತ್ರ ಕಚೇರಿ ಬಳಿಯೇ ಲಾಕ್ ಆಗಿತ್ತು.

ಸೇತುವೆ ದೊಡ್ಡ ಪ್ರಮಾಣದಲ್ಲಿ ಕುಸಿದ ಕಾರಣ ಆಟೋ ಹೊರಬರಲು ಜಾಗವೇ ಇರಲಿಲ್ಲ. ಈ ವೇಳೆ, ವಿಶ್ವವಿದ್ಯಾಲಯದ ಅಧಿಕಾರಿಗಳು ಆಟೋ ಚಾಲಕನಿಗೆ ಸಹಾಯ ಮಾಡುವ ಭರವಸೆ ನೀಡಿದ್ದರು. ಆದರೆ, ಯಾರೂ ಸಹಾಯ ಮಾಡಲಿಲ್ಲ. ವಿದ್ಯಾರ್ಥಿಗಳನ್ನು ರಕ್ಷಿಸಿದ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಸಿಬ್ಬಂದಿ ಕೂಡ ಯಾವುದೇ ರೀತಿಯ ಸಹಾಯ ಮಾಡಲಿಲ್ಲ. ಕೊನೆಗೆ ವಿಶ್ವವಿದ್ಯಾಲಯದ ಅಧಿಕಾರಿಗಳು ನಿಮ್ಮ ಹಣದಲ್ಲಿ ಆಟೋವನ್ನು ಲಿಫ್ಟ್ ಮಾಡಿಕೊಳ್ಳುವಂತೆ ಸೂಚಿಸಿದರು.

ಹೀಗಾಗಿ ಸೇತುವೆ ನಿರ್ಮಾಣಗೊಳ್ಳಲು ತಿಂಗಳುಗಳೇ ಬೇಕು. ಅಲ್ಲಿವರೆಗೆ ಆಟೋ ನಿಂತರೆ ಹಾಳಾಗುತ್ತೆ. ಜೊತೆಗೆ ಜೀವನ ಹೇಗೆಂದು ಆಟೋ ಚಾಲಕ ವಿನೋದ್ ಆರು ಸಾವಿರ ರೂಪಾಯಿ ಹಣ ಸಾಲ ಮಾಡಿ ತನ್ನ ಆಟೋವನ್ನು ಕ್ರೇನ್ ಮೂಲಕ ಲಿಫ್ಟ್ ಮಾಡಿಸಿಕೊಂಡಿದ್ದಾರೆ. ಸೇತುವೆ ಕುಸಿದಿದ್ದಕ್ಕೆ ಕಳಪೆ ಕಾಮಗಾರಿಯೇ ಕಾರಣ. ಅಧಿಕಾರಿಗಳು ಹಾಗೂ ಗುತ್ತಿಗೆದಾರನ ತಪ್ಪಿನಿಂದ ಈ ಅನಾಹುತ ಸಂಭವಿಸಿರೋದು. ಇದಕ್ಕೆ ಯಾರು ಹೊಣೆ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ನೂರು ರೂಪಾಯಿಗೆ ಬಾಡಿಗೆಗೆ ಬಂದ ಆಟೋ ಚಾಲಕ ಆರು ಸಾವಿರ ಕಳೆದುಕೊಂಡು ಸಾಲಗಾರನಾದಂತಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here