ಜೇನಿ ಗ್ರಾ.ಪಂ. ವ್ಯಾಪ್ತಿಯ ಶಾಶ್ವತ ಕುಡಿಯುವ ನೀರು ಯೋಜನೆಗೆ ಶಾಸಕ ಬೇಳೂರು ಚಾಲನೆ

0 354

ಹೊಸನಗರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸರಿಸಮಾನ ಅನುದಾನದ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ದೇಶದ ಪ್ರತಿಯೊಂದು ಹಳ್ಳಿಯ ಮನೆಮನೆಗೂ ಶಾಶ್ವತ ಶುದ್ದ ಕುಡಿಯುವ ನೀರು ಒದಗಿಸುವ ಮಹತ್ತರ ಕಾರ್ಯ ಇದಾಗಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ತಾಲೂಕಿನ ಜೇನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಂಬಳ್ಳಿಯಲ್ಲಿ 63.80 ಲಕ್ಷ ರೂ. ಅನುದಾನದ ಕುಡಿಯುವ ನೀರು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿ, ಶಾಸಕರಾದ ಬಳಿಕ ತಾವು ಈಗಾಗಲೇ ಜೇನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಅಭಿವೃದ್ದಿ ಕಾರ್ಯಗಳಿಗಾಗಿ 5.20ಕೋಟಿ ರೂ. ಅನುದಾನ ನೀಡಲಾಗಿದ್ದು, ಎಲ್ಲಾ ಕಾಮಗಾರಿಗಳು ಆರಂಭಗೊಂಡಿದೆ. ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯತಿಗೂ ತಲಾ ಐದಾರು ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ರಿಪ್ಪನ್‌ಪೇಟೆಗೆ 9.5 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ. ಆ ಮೂಲಕ ಕುಡಿಯುವ ನೀರಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. 2009ರಲ್ಲಿ ಸಾಗರ ಪಟ್ಟಣದಕ್ಕೆ ಶರಾವತಿ ನದಿಯಿಂದ ಕುಡಿಯುವ ನೀರಿಗಾಗಿ 70 ಕೋಟಿ ರೂ. ಅನುದಾನದಲ್ಲಿ ಯೋಜನೆ ಅನುಷ್ಠಾನಗೊಳಿಸಿದ್ದೆ. ಈ ಬಾರಿ ಹೊಸನಗರ ಪಟ್ಟಣವು ಸೇರಿದಂತೆ ತಾಲೂಕಿನ ಮೂರು ಹೋಬಳಿಯ 30 ಗ್ರಾಮ ಪಂಚಾಯತಿಗಳಿಗೆ ಚಕ್ರಾ ಅಣೆಕಟ್ಟಿನಿಂದ ಶುದ್ದ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ 280 ಕೋಟಿ ರೂ. ಅನುದಾನದ ಟೆಂಡರ್ ಅಂತಿಮವಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

ಕುಡಿಯುವ ನೀರು ಕಾಮಗಾರಿಯಲ್ಲಿ ರಾಜಕೀಯ ಸಲ್ಲದು ಎಂದ ಬೇಳೂರು, ಕಾಮಗಾರಿಗೆ ಅಡ್ಡಿಪಡಿಸುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದರು. ಗ್ರಾಮದ ಪ್ರತಿಯೊಂದು ಕುಟುಂಬಕ್ಕೂ ಜಾತ್ಯತೀತ, ಪಕ್ಷತೀತ ಹಾಗೂ ಧರ್ಮತೀತವಾಗಿ ಕುಡಿಯುವ ನೀರು ಹಂಚಿಕೆ ಆಗಬೇಕು. ಯಾರೊಬ್ಬರು ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಬಾರದು. ಸಮಸ್ಯೆ ಉದ್ಬವಿಸಿದಲ್ಲಿ ತಮ್ಮ ಗಮನಕ್ಕೆ ತರಬೇಕು. ಕುಡಿಯುವ ನೀರನ್ನು ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಿದಲ್ಲಿ ಅಂತವರ ವಿರುದ್ದ ಕೇಸು ದಾಖಲಿಸುವಂತೆ ಅಧಿಕಾರಿಗಳಿಗೆ ಬೇಳೂರು ಸೂಚಿಸಿದರು.

ಪ್ರಸಕ್ತ ಸಾಲಿನಲ್ಲಿ ಮಳೆಯ ಕೊರತೆಯ ಕಾರಣ ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಆಹಾಕಾರ ಸೃಷ್ಠಿಯಾಗಬಹುದು. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಕೊರತೆ ಕಂಡು ಬರುವ ಗ್ರಾಮಗಳಲ್ಲಿ ಕೊಳವೆ ಬಾವಿ ನಿರ್ಮಾಣಕ್ಕೆ ಈಗಾಗಲೇ ಆದೇಶಿಸಿದ್ದೇನೆ. ಏಪ್ರಿಲ್-ಮೇ ತಿಂಗಳ ಅಂತ್ಯಕ್ಕೆ ಕುಡಿಯುವ ನೀರನಿ ಕೊರತೆ ಉಲ್ಬಣಿಸಬಹುದು ಎಂಬ ಮಾಹಿತಿ ಲಭ್ಯವಿರುವ ಕಾರಣ ಜನತೆ ಮಳೆಗಾಲ ಸಮೀಪಿಸುವವರೆಗೂ ಹಂಡೆ ಸ್ನಾನ ಕೈ ಬಿಡಬೇಕೆಂದು ಮನವಿ ಮಾಡಿದರು.

ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಸದುಪಯೋಗದಿಂದ ಶ್ರೀಸಾಮಾನ್ಯರು ಇಂದು ನೆಮ್ಮದಿಯ ಜೀವನ ಸಾಗಿಸುವಂತಾಗಿದೆ. ರಾಜ್ಯದ ಪ್ರತಿಯೊಂದು ಕುಟುಂಬಕ್ಕೆ ಸರಿಸುಮಾರು ವಾರ್ಷಿಕ ರೂ 60ಸಾವಿರ ಹಣ ಸರ್ಕಾರದ ಉಚಿತ ಗ್ಯಾರಂಟಿಗಳಿಂದ ಲಭ್ಯವಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

ತಾಲೂಕಿನ ಸಮಗ್ರ ಅಭಿವೃದ್ದಿಗೆ ತಾವು ಕಟಿಬದ್ದರಾಗಿದ್ದು, ಶೀಘ್ರದಲ್ಲಿ ಸಾಗರ-ಹೊಸನಗರ ನಡುವೆ ನಾಲ್ಕಾರು ಸರ್ಕಾರಿ ಕೆಂಪು ಬಸ್ ಓಡಾಟಕ್ಕೆ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.

ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಉಪಾಧ್ಯಕ್ಷೆ ಅಕ್ಷತಾ, ಸದಸ್ಯರಾದ ವಿನೀಧ ಟೀಕಪ್ಪ, ಸರೋಜಮ್ಮ, ಲಕ್ಷ್ಮಣ, ಈರಮ್ಮ, ತಹಶೀಲ್ದಾರ್ ರಶ್ಮಿ, ಇಒ ನರೇಂದ್ರ ಕುಮಾರ್, ಕಳೂರು ಸೊಸೈಟಿ ಅಧ್ಯಕ್ಷ ದುಮ್ಮ ವಿನಯ್, ಪಿಡಿಒ ಕಾವೇರಿ ಸೇರಿದಂತೆ ಹಲವರು ಹಾಜರಿದ್ದರು.

Leave A Reply

Your email address will not be published.

error: Content is protected !!