ಪುಡಾರಿ ಪದ ಬಳಕೆ ; ಬಿ.ವೈ. ವಿಜಯೇಂದ್ರ ಕಾಂಗ್ರೆಸ್ ಕಾರ್ಯಕರ್ತರಿಗೆ ಕ್ಷಮೆ ಕೇಳಬೇಕು

0 436

ಶಿಕಾರಿಪುರ : ತಾಲ್ಲೂಕಿನ ಶಾಸಕರು, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರರವರು (B.Y Vijayendra) ತಮ್ಮ ಅಭಿನಂದನೆ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಕಾಂಗ್ರೆಸ್ (Congress) ಪಕ್ಷದವರಿಗೆ ಪುಡಾರಿಗಳು ಎಂಬ ಪದಬಳಕೆ ಮಾಡಿ ಭಾಷಣ ಮಾಡಿದ್ದಾರೆ ಈ ಮಾತನ್ನು ಅವರು ವಾಪಾಸ್ ಪಡೆದು‌ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಕ್ಷಮೆ ಕೇಳಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಭಂಡಾರಿ ಮಾಲತೇಶ್ ಆಗ್ರಹಿಸಿದರು.

ಪಟ್ಟಣದ ಸುದ್ದಿಮನೆಯಲ್ಲಿ ಸೋಮವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ತಾಲ್ಲೂಕಿನ ಶಾಸಕರು ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ವಿಧಾನಸಭೆಯ ವಿಪಕ್ಷ ನಾಯಕ ಆರ್ ಅಶೋಕ್ ರವರಿಗೆ ಸನ್ಮಾನ‌ ಸಮಾರಂಭದ ಸಂದರ್ಭದಲ್ಲಿ ಬಿ ವೈ ವಿಜಯೇಂದ್ರರವರು ಮಾತನಾಡುವಾಗ ತಾಲ್ಲೂಕಿನ ಕಾಂಗ್ರೆಸ್ ಪಕ್ಷದವರಿಗೆ ಪುಂಡರು ಎಂಬ ಪದಬಳಕೆ ಮಾಡಿ ಭಾಷಣ ಮಾಡಿದ್ದಾರೆ ಈ ಮಾತನ್ನು ಅವರು ವಾಪಾಸ್ ಪಡೆದು‌ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಕ್ಷಮೆ ಕೇಳಬೇಕು. ಈ ಮಾತು ಕೇವಲ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಿಗೆ ಮಾತ್ರ ಅನ್ವಯಿಸುವುದಿಲ್ಲ ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಇವರ ವಿರುದ್ಧವಾಗಿ ಮತ ಚಲಾಯಿಸಿದ ಸುಮಾರು 78 ಸಾವಿರ ಮತದಾರರಿಗೆ ಹೇಳಿದಂತಾಗುತ್ತದೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ತಮ್ಮ ಅನೇಕ ಬೆಂಬಲಿಗರೊಂದಿಗೆ 1980 ರಲ್ಲಿ ಮಾಜಿ ಬಂಧಿಖಾನೆ ಸಚಿವ ವೆಂಕಟಪ್ಪರವರ ಮನೆ ಮೇಲೆ ಗೂಂಡಾಗಿರಿ ರೀತಿಯಲ್ಲಿ ಕಲ್ಲು ತೂರಾಟ ನಡೆಸಿದ್ದಲ್ಲದೇ, ಅನೇಕ ಕಾರ್ಯಕರ್ತರು ಅವರ ಕುಟುಂಬಸ್ಥರ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದು ಮತ್ತು ಕಾಂಗ್ರೆಸ್ ಮುಖಂಡ ಭೈರನಹಳ್ಳಿ ಹಾಲಪ್ಪರವರನ್ನು ಕತ್ತೆ ಮೇಲೆ ಮೆರವಣಿಗೆ ಮಾಡಿದ್ದರಲ್ಲ ನಿಮ್ಮ ತಂದೆ ಅದನ್ನು ಏನೆಂದು  ಕರೆಯಬೇಕು ಎಂದು ಪ್ರಶ್ನಿಸಿದ ಅವರು, ಬಿ.ಎಸ್.ವೈ ರವರನ್ನು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರ ವರದಿ ಆಧಾರದಿಂದ ಮುಖ್ಯಮಂತ್ರಿಗಿರಿಗೆ ರಾಜೀನಾಮೆ ಕೊಟ್ಟು ಎಲ್ಲಿಗೆ ಹೋಗಿದ್ದರು ಎಂದರು.

2021-22ರಲ್ಲಿ ನಿರ್ಮಾಣವಾಗುತ್ತಿದ್ದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕಾಮಗಾರಿ ಪೂರ್ಣಗೊಳ್ಳದ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದ್ದೀರಿ, ನಂತರ ಈಗ ರಾಜ್ಯದಲ್ಲಿ  ಕಾಂಗ್ರೆಸ್ ಸರ್ಕಾರವಿದ್ದರೂ ಸಂಸದ ಬಿ.ವೈ ರಾಘವೇಂದ್ರ ರವರು ಸರ್ಕಾರದ ಮುಖ್ಯಮಂತ್ರಿಯವರಿಗಾಗಲಿ, ಆರೋಗ್ಯ ಸಚಿವರಿಗಾಗಲಿ ಮಾಹಿತಿ ನೀಡದೇ ತಮಗೆ ಬೇಕಾದವರನ್ನು ಕರೆದುಕೊಂಡು ಹೋಮ ಹವನ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಚಾಲನೆ ನೀಡಿದ್ದೀರಿ ಇದು ನಿಮ್ಮ ಶಿಷ್ಟಾಚಾರವೇ ಎಂದು ಪ್ರಶ್ನಿಸಿದ ಅವರು, ಬಿ ಎಸ್ ಯಡಿಯೂರಪ್ಪರವರು ಒಂದು ಬಾರಿಯೂ ನಿಚ್ಚಳ ಬಹುಮತದಿಂದ ಅಧಿಕಾರಕ್ಕೆ ಬರಲಿಲ್ಲ ನಾಲ್ಕು ಬಾರಿ ಮುಖ್ಮಮಂತ್ರಿಯಾದರೂ ಹಿಂಬಾಗಿಲಿನಿಂದ ಅಧಿಕಾರ ಹಿಡಿದಿದ್ದಾರೆ, ನೀವು ಹೀಗೆಯೇ ಹಗುರವಾಗಿ ಮಾತನಾಡಿದರೆ ಜೆಡಿಎಸ್ ಪಕ್ಷದಂತೆಯೇ ಕ್ಷೇತ್ರಗಳನ್ನು ಕಳೆದುಕೊಳ್ಳುವುದು ನಿಶ್ಚಯವಾಗಿದೆ.

ಸಾಕಷ್ಟು ಹಿರಿಯ ಬಿಜೆಪಿ ನಾಯಕರಿದ್ದರು ಯಡಿಯೂರಪ್ಪರವರು ತಮ್ಮ ಪುತ್ರ ವ್ಯಾಮೋಹದಿಂದ ಮಗನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ, ನೂರಾರು ಕೋಟಿಗಳನ್ನು ತಂದು ತಾಲೂಕನ್ನು ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳುತ್ತಾರೆ ಆದರೆ ತಾಲ್ಲೂಕಿನ ಅಭಿವೃದ್ಧಿಗಿಂತ ಅವರ ಅಭಿವೃದ್ಧಿ ಹೆಚ್ಚಾಗಿದೆ.ರಾಜಕೀಯ ಅನುಭವದ ಕೊರತೆಯಿಂದ ಹೀಗೆ ಮಾತನಾಡುತ್ತಿರುವ ವಿಜಯೇಂದ್ರ  ಕೂಡಲೇ ಶಿಕಾರಿಪುರ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರ ಕ್ಷಮೆಯಾಚನೆ ಮಾಡದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಕಾಂಗ್ರೆಸ್ ಕಮಿಟಿಯ ಕಾರ್ಯದರ್ಶಿ ಬಡಗಿ ಪಾಲಾಕ್ಷಪ್ಪ, ಅಲ್ಲಂ ಭಾಷಾ, ತಿಮ್ಮಲಾಪುರದ ಮಂಜು, ಪ್ರಶಾಂತ್, ಮುನಿಯಪ್ಪ ದಿಂಡದಹಳ್ಳಿ, ಶಫಿವುಲ್ಲಾ ಬನ್ನೂರ್ ಚರಣ್ ಗೌಸೋಸಾಬ್, ಅನಿಫ್ ಸಾಬ್ ಮುಂತಾದವರು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!