ಸೊರಬ: ಪಟ್ಟಣದಲ್ಲಿ ಹಳೇ ನಾಟಗಳನ್ನು ಅಕ್ರಮವಾಗಿ ಸಾಗಾಟಕ್ಕೆ ಸಿದ್ದವಾಗಿದ್ದ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದಿದ್ದಾರೆ.
ಪಟ್ಟಣ ಪುರಸಭೆ ಮುಂಭಾಗದ ವಾಣಿಜ್ಯ ಸಂಕೀರ್ಣದ ದಾಸ್ತಾನು ಕೊಠಡಿಯಲ್ಲಿ ಪಟ್ಟಣದ ಹಳೇ ತಾಲೂಕು ಕಚೇರಿ ಸೇರಿದಂತೆ ಇತರೆ ಸರ್ಕಾರಿ ಕಚೇರಿಗಳ ನಾಟವನ್ನು ಸಂಗ್ರಹಿಸಲಾಗಿತ್ತು. ಆದರೆ ಅಕ್ರಮವಾಗಿ ಸಾಗಾಟ ಮಾಡುತ್ತಿವ ಖಚಿತ ಮಾಹಿತಿ ಮೇರೆಗೆ ಎಸಿಎಫ್ ಪ್ರವೀಣ್ ಕುಮಾರ್ ಬಸ್ರೂರ್ ಅವರ ತಂಡ ದಾಳಿ ನಡೆಸಿ, ಸಾಗಾಟಕ್ಕೆ ಸಿದ್ದವಾಗಿದ್ದ ಹಳೇ ನಾಟ ಮತ್ತು ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಕಳೆದ ಎರಡ್ಮೂರು ದಿನಗಳಿಂದ ಇದೇ ಮಾದರಿ ಮೂರ್ನಾಲ್ಕು ಲೋಡ್ ನಾಟ ಸಾಗಾಟ ಮಾಡಲಾಗಿದೆ. ಇದಕ್ಕೆ ಸ್ಥಳೀಯ ಅರಣ್ಯಾಧಿಕಾರಿ ಮತ್ತು ಪುರಸಭೆ ಮುಖ್ಯಾಧಿಕಾರಿಗಳು ಸಾಥ್ ನೀಡಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ.
ಇನ್ನು ಯಾವುದೇ ಒತ್ತಡಕ್ಕೆ ಮಣಿಯದೇ ಅಧಿಕಾರಿಗಳೇ ನಡೆಸುತ್ತಿದ್ದ ಅಕ್ರಮವನ್ನು ಬಯಲಿಗೆ ತಂದ ಎಸಿಎಫ್ ಪ್ರವೀಣ್ ಕುಮಾರ್ ಬಸ್ರೂರ್ ನೇತೃತ್ವದ ತಂಡವನ್ನು ಸಾರ್ವಜನಿಕರು ಪ್ರಶಂಸಿಸುತ್ತಿದ್ದಾರೆ.