ಸೇತುವೆ ನಿರ್ಮಾಣ ಕಾಮಗಾರಿ: ಎಚ್ಚರಿಕೆ ಫಲಕ ಅಳವಡಿಸಿದೆ ನಿರ್ಲಕ್ಷ್ಯ, ಕಾಮಗಾರಿ ನಡೆಯುವ ಸ್ಥಳಗಳಲ್ಲಿ ವಾಹನಗಳ ಸವಾರಿ ಸವಾಲಿನ ಕೆಲಸ !

0
596

ಹೊಸನಗರ: ಬೈಂದೂರು – ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಹೊಸನಗರ ತಾಲ್ಲೂಕಿನ ಗೇರುಪುರ ಎಂಬಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಭರದಿಂದ ಸಾಗುತ್ತಿದ್ದು ಇಲ್ಲಿನ ಗ್ರಾಮೀಣ ಪ್ರದೇಶದ ಜನರಿಗೆ ಇನ್ನಿಲ್ಲದ ಸಂತಸ ತಂದಿದೆ.

ಹಲವು ಕೋಟಿ ರೂ.ಗಳ ವೆಚ್ಚದಲ್ಲಿ ಆರಂಭವಾದ ಈ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾರ್ಯವು ವಿಳಂಬದಿಂದ ಆರಂಭವಾದರೂ ರಸ್ತೆಯ ಇಕ್ಕೆಲಗಳ ಹೊಲ ಗದ್ದೆಗಳಿಗೆ ಮಳೆ ನೀರು ಸರಾಗವಾಗಿ ಹರಿಯಲು ರಸ್ತೆಯಲ್ಲಿ ಎರಡು ಮೂರು ಆಳೆತ್ತರದ ಗುಂಡಿಗಳನ್ನು ತೆಗೆದು ಇಲ್ಲಿ ಚಿಕ್ಕ ಚಿಕ್ಕ ಸೇತುವೆಗಳ ನಿರ್ಮಾಣದ ಕಾಮಗಾರಿ ವೇಗದಲ್ಲಿ ನಡೆಯುತ್ತಿದೆ.

ಆದರೆ ಎರಡು ಮೂರು ಆಳೆತ್ತರದ ಗುಂಡಿಗಳನ್ನು ತೆಗೆದು ಕಾಮಗಾರಿ ಮಾಡುವುದಕ್ಕಾಗಿ ವಾಹನಗಳ ಸಂಚಾರಕ್ಕೆ ಪಕ್ಕದಲ್ಲಿಯೇ ಇರುವ ಜಮೀನುಗಳ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಹೊಲಗದ್ದೆಗಳಲ್ಲಿ ವಾಹನಗಳು ಸಂಚರಿಸುವಾಗ ಹಿಂದಿನಿಂದ ಅಥವಾ ಮುಂದಿನಿಂದ ಬರುವ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಕಾರಿನಲ್ಲಿ ಹಾಗೂ ಬಸ್ಸಿನಲ್ಲಿ ಸಂಚರಿಸುವವರಿಗೆ ಮಣ್ಣಿನ ಧೂಳು ಮುಖಕ್ಕೆ, ದೇಹಕ್ಕೆ ಬೀಳುತ್ತಿದೆ. ಈ ಮಣ್ಣಿನ ಧೂಳು ನಿಯಂತ್ರಿಸಲು ನೀರಿನ ಸಿಂಪರಣೆಯಾಗುತ್ತಿಲ್ಲ.

ಚಿಕ್ಕ ಚಿಕ್ಕ ಸೇತುವೆಗಳ ನಿರ್ಮಾಣದ ಕಾಮಗಾರಿ ಸ್ಥಳದ ಅಕ್ಕಪಕ್ಕದಲ್ಲಿ ಸೇತುವೆ ನಿರ್ಮಾಣಕ್ಕೆ ಬೇಕಾದ ಕಬ್ಬಿಣ, ಜಲ್ಲಿಕಲ್ಲು, ಸಿಮೆಂಟ್ ಸೇರಿದಂತೆ ವಿವಿಧ ಸಲಕರಣೆಗಳನ್ನು ಹೊತ್ತ ಬೃಹದಾಕಾರದ ಲಾರಿಗಳು ನಿಂತಿರುತ್ತವೆ. ಉಳಿದ ಸಣ್ಣ ಸಣ್ಣ ಜಾಗದಲ್ಲೇ ಬೇರೆ ಬೇರೆ ವಾಹನಗಳು ಸಂಚರಿಸಬೇಕಾಗಿದೆ.

ರಸ್ತೆ ಮಧ್ಯದಲ್ಲಿ ಸೇತುವೆ ನಿರ್ಮಾಣದ ಪ್ರಗತಿಯಲ್ಲಿರುವ ಕಾಮಗಾರಿಗಳ ಸ್ಥಳಗಳಲ್ಲಿ ವಾಹನ ಸವಾರರಿಗೆ ಕಾಮಗಾರಿ ನಡೆಯುತ್ತಿರುವುದರ ಬಗ್ಗೆ ಮಾಹಿತಿ ನೀಡುವ ಎಚ್ಚರಿಕೆ ನೀಡುವ ನಾಮಫಲಕಗಳ ಬ್ಯಾರಿಕೇಡ್ ಹಾಕಿರುವುದಿಲ್ಲ. ಇಲ್ಲಿ ಅನೇಕ ಕಡೆ ರಸ್ತೆ ನೇರವಾಗಿ ಯಾವುದೇ ಉಬ್ಬು, ತಗ್ಗು ಗುಂಡಿ ಗುದ್ದಲುಗಳಿಲ್ಲದೆ ಸುಗಮವಾಗಿರುವುದರಿಂದ ಅನೇಕ ವಾಹನ ಸವಾರರು ಅತಿ ವೇಗವಾಗಿ ಚಲಿಸುತ್ತಿದ್ದಾರೆ. ಅವರಿಗೇನಾದರೂ ಅನಾಹುತ ಸಂಭವಿಸಿದರೆ ಏನು ಗತಿ ? ಇದಕ್ಕೆ ಯಾರು ಹೊಣೆ ? ಎಂಬ ಪ್ರಶ್ನೆ ಇಲ್ಲಿ ಉದ್ಭವವಾಗುತ್ತಿದೆ.

ಆದ್ದರಿಂದ ರಸ್ತೆ ಅಭಿವೃದ್ಧಿ ಪಡಿಸುತ್ತಿರುವವರಾಗಲೀ, ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲಿ ಮುಂಜಾಗ್ರತೆ ವಹಿಸಿ ಮುಂದೆ ಆಗಬಹುದಾದ ಅನಾಹುತಗಳ ಬಗ್ಗೆ ನಿಗಾವಹಿಸಿ ಕೂಡಲೇ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕಿದೆಂದು ಸಾರ್ವಜನಿಕ ಆಗ್ರಹಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here