ಜಿಲ್ಲಾ ಮಟ್ಟದ ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮ | ಯುವ ಜನತೆ ನಮ್ಮ ದೇಶದ ಶಕ್ತಿ ಮತ್ತು ಭವಿಷ್ಯ : ಡಾ.ನಾರಾಯಣಗೌಡ

0
175

ಶಿವಮೊಗ್ಗ: ಯುವಜನತೆಯೇ ನಮ್ಮ ದೇಶದ ಶಕ್ತಿ ಮತ್ತು ಭವಿಷ್ಯ. ಯುವಜನತೆ ಮನಸ್ಸು ಮಾಡಿದರೆ ದೇಶದ ಭವಿಷ್ಯವನ್ನೇ ಬದಲಾಯಿಸಬಹುದು ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣ ಗೌಡ ಹೇಳಿದರು.

ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ ಕುವೆಂಪು ವಿವಿ ಹಾಗೂ ಇನ್ನೋವೇಟಿವ್ ಯೂತ್ ಕ್ಲಬ್ ಶಿವಮೊಗ್ಗ ಇವರ ಸಹಯೋಗದಲ್ಲಿ ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಯುವಜನತೆ ಆತ್ಮಪೂರ್ವಕವಾಗಿ ಶಕ್ತಿಯನ್ನು ಒಗ್ಗೂಡಿಸಿದಲ್ಲಿ ಉತ್ತಮ ಅಭಿವೃದ್ದಿ ಸಾಧ್ಯವಾಗುತ್ತದೆ. ತಮ್ಮ ಕುಟುಂಬದಿಂದ ಆರಂಭವಾಗಿ ಅಕ್ಕಪಕ್ಕ, ತಮ್ಮ ಗ್ರಾಮ, ತಾಲ್ಲೂಕು, ಜಿಲ್ಲೆ ಹೀಗೆ ದೇಶಾದ್ಯಂತ ತಮ್ಮ ಶಕ್ತಿಯನ್ನು ವಿಸ್ತರಿಸಬೇಕು. ಹೇಗೆ ತಾವು ಇಂಜಿನಿಯರ್, ಡಾಕ್ಟರ್ ಇತರೆ ಆಗಬೇಕೆಂದುಕೊಂಡು ಸಾಧನೆ ಮಾಡುತ್ತೀರೋ ಹಾಗೇಯೇ ದೇಶೋದ್ದಾರದ ಸಾಧನೆ ಮಾಡಬೇಕು.

ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಯುವಜನತೆ ಬಗ್ಗೆ ಉನ್ನತವಾದ ಕನಸು ಕಂಡಿದ್ದಾರೆ. ಅವರ ಈ ಕನಸು ಮತ್ತು ವಿಶ್ವಾಸಕ್ಕೆ ನೀವು ಶಕ್ತಿ ತುಂಬಿ ಸಾಕಾರಗೊಳಿಸಬೇಕು. ಮನೆಯಲ್ಲಿ ಯಾರಾದರೂ ಕುಡಿತ ಇನ್ನಿತರೆ ದುಶ್ಚಟಗಳನ್ನು ಹೊಂದಿದ್ದರೆ ಅವರ ಮನವೊಲಿಸಿ ಬಿಡಿಸುವ, ತಮ್ಮ ಸುತ್ತಮುತ್ತ ಸ್ವಚ್ಚತೆ ಕಾಪಾಡುವ ಕೆಲಸ ಮಾಡಬೇಕು. ಹೆಣ್ಣುಮಕ್ಕಳಿಗೆ ಮನವೊಲಿಸುವ ಶಕ್ತಿ ಹೆಚ್ಚಿದ್ದು ಈ ನಿಟ್ಟಿನಲ್ಲಿ ಒಳ್ಳೆಯ ಬೆಳವಣಿಗೆಗೆ ಕಾರಣರಾಗಬೇಕು ಎಂದ ಅವರು ಯುವಜನತೆ ತಮ್ಮ ಶ್ರಮದಿಂದ ರಾಜ್ಯವನ್ನು ಒಂದನೇ ಸ್ಥಾನಕ್ಕೆ ತರಬೇಕೆಂದರು.

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಮಾತನಾಡಿ, ಈ ದೇಶದ ಮೂಲ ಶಕ್ತಿ ನಮ್ಮ ಯುವಜನತೆಯಾಗಿದ್ದು, ದೇಶವನ್ನು ಬದಲಾಯಿಸುವ ಶಕ್ತಿ ಅವರಿಗಿದೆ. ಅದಕ್ಕಾಗಿಯೇ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಇಂದು ಏಕಕಾಲದಲ್ಲಿ ರಾಷ್ಟ್ರಾದ್ಯಂತ ನೆರೆಹೊರೆ ಯುವ ಸಂಸತ್ ಕಾರ್ಯಕ್ರಮ ಆಯೋಜಿಸಿ ಉತ್ತಮ ದೇಶ ಕಟ್ಟಲು ಯುವಜನತೆಗೆ ಕರೆ ಕೊಟ್ಟಿದ್ದಾರೆ. ಹಾಗೂ ವಿಶ್ವದಲ್ಲಿ ಇಂದು ಭಾರತ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದಾರೆ ಎಂದರು.

ನಮ್ಮಲ್ಲಿ ಜಾತಿ ಬೇಧವಿರಬಾರದು. ನಾವೆಲ್ಲ ಒಂದೇ. ಎಲ್ಲರ ಹೃದಯದಲ್ಲಿ ಭಾರತಾಂಬೆ ನೆಲೆಸಿದ್ದಾಳೆ. ದೇಶದ ಒಳಗೆ, ಹೊರಗೆ ಇಂದು ಉಗ್ರಗಾಮಿಗಳು ಕೋಮು ಭಾವನೆ ಬಿತ್ತುತ್ತಿದ್ದು ಇದಕ್ಕೆ ಯುವಜನರಾದ ನೀವು ತಕ್ಕ ಉತ್ತರ ನೀಡಬೇಕು ಹಾಗೂ ಪೋಷಕರು, ಅಧ್ಯಾಪಕರ ಆಸೆಯಂತೆ ಒಳ್ಳೆಯ ವಿದ್ಯಾವಂತರಾಗಿ, ರಾಷ್ಟ್ರಭಕ್ತಿ ಬೆಳೆಸಿಕೊಂಡು ದೇಶಕ್ಕೆ ಉತ್ತಮ ಆಸ್ತಿಯಾಗಬೇಕೆಂದು ಆಶಿಸಿದರು.

ನೆಹರು ಯುವ ಸಂಘಟನೆಯ ರಾಜ್ಯ ನಿರ್ದೇಶಕ ನಟರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಧಾನಮಂತ್ರಿಯವರ ಸೂಚನೆಯಂತೆ ಇಂದು ದೇಶದ 748 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮ ಆಯೋಜಿಸಿದ್ದು, ಯುವಜನತೆ ಮೂಲಕ ಎಲ್ಲೆಡೆ ಸ್ವಚ್ಚತೆ, ಆರೋಗ್ಯ, ಕ್ರೀಡೆ, ಸಂಸ್ಕøತಿ ಇತ್ಯಾದಿ ಬಗ್ಗೆ ತಿಳುವಳಿಕೆ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರಸ್ತುತ ರಾಜ್ಯದಲ್ಲಿ 5 ಲಕ್ಷ ಎನ್‍ಎಸ್‍ಎಸ್ ಸ್ವಯಂ ಸೇವಕರಿದ್ದು ನಮ್ಮ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು ಈ ಸಂಖ್ಯೆಯನ್ನು 10 ಲಕ್ಷಕ್ಕೆ ಏರಿಸುವ ಗುರಿ ಹೊಂದಿದ್ದಾರೆ. ಮಹಿಳಾ ಸಬಲೀಕರಣಕ್ಕಾಗಿ ಸುಮಾರು 3 ಲಕ್ಷ ಮಹಿಳೆಯರಿಗೆ ಓಬವ್ವ ಸ್ವಂರಕ್ಷಣಾ ತರಬೇತಿ ನೀಡಲಾಗುತ್ತಿದೆ. ಅವಕಾಶವಂಚಿತ ಯುವಜನತೆಗೆ ಪೈಲಟ್ ತರಬೇತಿ ನೀಡುವ ಯೋಜನೆಯನ್ನು ಸಹ ಸಚಿವರು ಹಾಕಿಕೊಂಡಿದ್ದಾರೆ ಎಂದರು.

ಜೆಪಿಎನ್ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ.ದಿಲೀಪ್ ಕುಮಾರ್ ಪಾಂಡೆ ಉಪನ್ಯಾಸ ನೀಡಿ, ನಮ್ಮೆಲ್ಲರ ನಿಜವಾದ ಐಕಾನ್ ಸ್ವಾಮಿ ವಿವೇಕಾನಂದ, ಶಿವಾಜಿ ಮತ್ತು ಇತರೆ ಸಾಧು ಸಂತರು. ಯುವಜನತೆ ಸ್ವಾಮಿ ವಿವೇಕಾನಂದರ ಜೀವನದ ತತ್ವಾದರ್ಶಗಳನ್ನು ಅರಿತು ಅಳವಡಿಸಿಕೊಂಡಲ್ಲಿ ಬದುಕು ಬದಲಾಗುವುದರಲ್ಲಿ ಅನುಮಾನವೇ ಇಲ್ಲ. ಸ್ವಾಮಿ ವಿವೇಕಾನಂದರು ಅಲ್ಪಾಯು ಆದರೂ ಅವರು ನಮಗೆ ನೀಡಿರುವ ಸಂದೇಶಗಳು ಬೆಲೆ ಕಟ್ಟಲಾರದಂತಹವು.

ಮಾನವನ ಇತಿಹಾಸ ಆರಂಭದಿಂದ ಜಗತ್ತಿನಲ್ಲಿ ಕೋಟ್ಯಾಂತರ ಭಾಷಣಗಳಾಗಿವೆ. ಅದರಲ್ಲಿ 7 ಭಾಷಣಗಳನ್ನು ಮನುಕುಲ ಪರಿವರ್ತಿಸುವ ಭಾಷಣಗಳೆಂದು ಗಿನ್ನೆಸ್ ದಾಖಲೆಯಲ್ಲಿ ಸೇರಿಸಲಾಗಿದೆ. ಅದರಲ್ಲಿ ನಮ್ಮ ದೇಶದ ಬುದ್ದ ಮತ್ತು ಸ್ವಾಮಿ ವಿವೇಕಾನಂದರ ಭಾಷಣ ಸೇರಿವೆ. ನಮ್ಮ ರಾಷ್ಟ್ರವನ್ನು ಪಾಶ್ಚಾತ್ಯರು ಭಿಕ್ಷುಕರ, ಮೌಢ್ಯರ, ಅಂಗವಿಕಲರ ರಾಷ್ಟ್ರ ಎಂದು ಬಿಂಬಿಸಿತ್ತು. ಆದರೆ ನಮ್ಮದು 5 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಅತ್ಯಂತ ಪ್ರಾಚೀನವಾದ ದೇಶ. ಜಗತ್ತಿನಲ್ಲೇ ವಿಶ್ವವಿದ್ಯಾಲಯದ ಪರಿಕಲ್ಪನೆ ನೀಡಿದ ಮೊದಲ ದೇಶ. ಇಂತಹ ಸುಸಂಸ್ಕøತ, ಸಂಪತ್ಭರಿತ ರಾಷ್ಟ್ರದ ಪರಿಚಯವನ್ನು ಜಗತ್ತಿಗೆ ಮಾಡಿಸಿದ್ದು ಸ್ವಾಮಿ ವಿವೇಕಾನಂದನಂತಹವರು.

ದೇಶ/ಸಮಾಜವನ್ನು ಬದಲಾವಣೆ ಮಾಡುವ ಶಕ್ತಿ ಯುವಜನತೆಗೆ ಇದೆ. ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ ಎಂದಿದ್ದಾರೆ ಅವರು. ಶಿಕ್ಷಣಕ್ಕೆ ಅದ್ಭುತ ಶಕ್ತಿ ಇದೆ. ಇದು ಉತ್ತಮ ನಡತೆ ನೀಡಿ, ಮನಸ್ಸಿನ ಶಕ್ತಿ ದ್ವಿಗುಣಗೊಳಿಸುತ್ತದೆ ಹಾಗೂ ಸ್ವಂತ ಕಾಲಿನ ಮೇಲೆ ನೀಲ್ಲುವಂತೆ ಮಾಡುತ್ತದೆ ಎಂದಿದ್ದರು. ಜಗತ್ತಿನ ಎಲ್ಲ ಶಕ್ತಿ ನಿನ್ನಲ್ಲಿದೆ. ಅದನ್ನು ನೀರು ಹೊರತೆಗೆದು ನಿನ್ನ ಗುರಿ ಮುಟ್ಟಬೇಕು. ಜಗದ ಸೇವೆ ಮೂಲಕ ಆತ್ಮದ ಕಲ್ಯಾಣ ಸಾಧ್ಯವೆಂದ ಅವರು ಆಧ್ಯಾತ್ಮ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖ ಎಂದಿದ್ದರು. ಈ ನಿಟ್ಟಿನಲ್ಲಿ ಯುವಜನತೆ ಸಾಗಬೇಕೆಂದರು.

ಇದೇ ಸಂದರ್ಭದಲ್ಲಿ ಪ್ರೊ. ವಿಲಿಯಂ ಡಿಸೋಜಾ ಉಪನ್ಯಾಸ ನೀಡಿದರು. ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ, ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ, ಕುವೆಂಪು ವಿವಿ ಎನ್‍ಎಸ್‍ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ನಾಗರಾಜ್ ಪರಿಸರ, ವಿದ್ಯಾರ್ಥಿಗಳು, ಇನ್ನಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here