ಪ್ರಭುದೊಡ್ಡಜ್ಜಯ್ಯನವರ ಕಾರ್ತಿಕ ಜಾತ್ರಾ ಮಹೋತ್ಸವ

0
103

ಕಡೂರು: ಪರಮತಪಸ್ವಿ ಶ್ರೀಗುರು ಪ್ರಭುದೊಡ್ಡಜ್ಜಯ್ಯನವರ 77ನೇ ಕಾರ್ತಿಕ ಪೂರ್ಣಿಮ ಜಾತ್ರಾ ಮಹೋತ್ಸವ ಕೆ. ಬಿದರೆಮಠದಲ್ಲಿ ಸಂಪನ್ನಗೊಂಡಿತು.

ಸಿಂಗಟಗೆರೆ ಕಂಚುಗಲ್‍ಬಿದರೆ ಗ್ರಾಮದ ದೊಡ್ಡಮಠದಲ್ಲಿ ನ. 15ರಿಂದ ಆರಂಭಗೊಂಡ ಜಾತ್ರಾ ಮಹೋತ್ಸವ ನಿನ್ನೆ ರಾತ್ರಿ ಕಾರ್ತಿಕ ದೀಪೋತ್ಸವ, ಹಗಲು ಶ್ರೀಗಳ ರಜತಮೂರ್ತಿಯ ಅಡ್ಡಪಲ್ಲಕ್ಕಿ ಉತ್ಸವ ಜಾನಪದ ಕಲಾ ತಂಡಗಳು ವಾದ್ಯಗೋಷ್ಠಿಯೊಂದಿಗೆ ಮದ್ದುಗುಂಡಿನ ಸುರಿಮಳೆ ಸಹಿತ ನೆರವೇರಿತು. ಗುಗ್ಗಳಸೇವೆಯಲ್ಲೂ ನೂರಾರುಮಂದಿ ಪಾಲ್ಗೊಂಡಿದ್ದರು.

ಶ್ರೀಪ್ರಭುಕುಮಾರ ಶಿವಾಚಾರ್ಯಸ್ವಾಮೀಜಿ ನೇತೃತ್ವದಲ್ಲಿ ಸೋಮವಾರ ಬೆಳಗಿನಜಾವ 5ಗಂಟೆಗೆ ಬ್ರಾಹ್ಮಿ ಮುಹೂರ್ತದಲ್ಲಿ ಗಂಗಾಪೂಜೆ, ವಾಸ್ತುಶಾಂತಿ, ವಾಸ್ತು ಹೋಮದೊಂದಿಗೆ ಈ ವರ್ಷದ ಧಾರ್ಮಿಕ ಆಚರಣೆ ಪ್ರಾರಂಭವಾಯಿತು. ನ. 16ರಂದು ಬೆಳಗು ಷಟ್‍ಸ್ಥಳ ಧ್ವಜಾರೋಹಣ, ಪಂಚ ಕಳಸ ಸ್ಥಾಪನೆ, ವಿಗ್ರಹ ಸಂಸ್ಕಾರ, ಸಂಜೆ ಗಣಹೋಮ, ದೇವತಾ ಹೋಮ ನಡೆಯಿತು. ಶ್ರೀಕಲ್ಲೇಶ್ವರಸ್ವಾಮಿ ಸಮುದಾಯಭವನ ಉದ್ಘಾಟಿಸಲಾಯಿತು.

ಅಷ್ಟಬಂಧಪ್ರತಿಷ್ಠೆ, ಅಭಿಷೇಕ, ಪ್ರಧಾನಹೋಮ ಶ್ರೀಗುರುಪ್ರಭುದೊಡ್ಡಜ್ಜಯ್ಯನವರ ನೂತನ ಗದ್ದುಗೆಯಲ್ಲಿ ನೆರವೇರಿತು. ಯಡೆಯೂರು ಶ್ರೀರೇಣುಕ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಶಿಖರ ಕಳಸರೋಹಣ 1001 ಕುಂಬಾಭಿಷೇಕ ನೆರವೇರಿತು.

ವಿಧಾನಪರಿಷತ್ ಉಪಸಭಾಪತಿ ಪ್ರಾಣೇಶ್, ಕಡೂರುಶಾಸಕ ಬೆಳ್ಳಿಪ್ರಕಾಶ್ ನೂತನ ಗದ್ದುಗೆಯ ಶಿಲಾನ್ಯಾಸ ನೆರವೇರಿಸಿದರು.

ಮಧ್ಯಾಹ್ನ ಧರ್ಮಜಾಗೃತಿ ಸಮಾರಂಭವನ್ನು ಉದ್ಘಾಟಿಸಿದ ಆನಂದಪುರಂ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರಸ್ವಾಮೀಜಿ ಪ್ರಭುದೊಡ್ಡಜ್ಜಯ್ಯನವರ ಲೀಲೆಗಳನ್ನು ವಿವರಿಸಿದರು. ಸಾನಿಧ್ಯವಹಿಸಿದ್ದ ಹುಬ್ಬಳ್ಳಿ ಮೂರುಸಾವಿರ ಮಠಾಧ್ಯಕ್ಷ ಶ್ರೀಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಗುರುವಿರಕ್ತ ಪರಂಪರೆಯ ಬಿದರೆದೊಡ್ಡಮಠ ನಾಡಿಗೆ ವಿಶೇಷ ಕೊಡುಗೆ ನೀಡಿದೆ ಎಂದು ಶ್ಲಾಘಿಸಿದರು.

ಶಂಕರದೇವರಮಠ, ತರೀಕೆರೆ ಕುಂಬಾರಗುಂಡಿರಸ್ತೆ ಮಠ, ದೊಡ್ಡಗುಣಿಮಠ, ಹೊನ್ನವಳ್ಳಿಮಠ, ಕೋಳಗುಂದಮಠ, ಮಾಡಾಳುಮಠ, ಬಿಳಕಿಮಠ, ತಾವರೆಕೆರೆಶಿಲಾಮಠ, ಮಾದೇಹಳ್ಳಿಮಠ, ತೆಂಡೇಕೆರೆಮಠ, ನಂದಿಪುರಮಠ, ದೊಡ್ಡಮೇಟಿಕುರ್ಕೆ ವಿರಕ್ತಮಠ, ಬೀರೂರುಮಠದ ಶ್ರೀಗಳು ಉಪಸ್ಥಿತರಿದ್ದರು. ಸ್ಥಳೀಯ ಮುಖಂಡರಾದ ಪ್ರಭುರಾಜಶೇಖರ್, ನಿರಂಜನ್, ಟಿ. ಕೆ. ಜಗದೀಶ್, ಕೆ. ಎಸ್. ಆನಂದ, ಮಹೇಶ್‍ಒಡೆಯರ್, ರಾಮಪ್ಪ, ಗೋವಿಂದಪ್ಪ, ಪ್ರಭುಲಿಂಗಶಾಸ್ತ್ರಿ ವೇದಿಕೆಯಲ್ಲಿದ್ದರು. ಶಿವಮೊಗ್ಗದ ಶಾಂತಾಆನಂದ ಕಾರ್ಯಕ್ರಮ ನಿರೂಪಿಸಿ, ಸಂಗೀತಸೇವೆ ನೆರವೇರಿಸಿದರು.

ನ. 18ರಂದು ಬೆಳಗ್ಗೆ ಶಿವದೀಕ್ಷಾ ಸಂಸ್ಕಾರ ನೀಡಲಾಯಿತು. ಉತ್ಸವಕ್ಕೆ ಆಗಮಿಸಿದ್ದ ಮರವಂಜಿಯ ಶ್ರೀಉಜ್ಜಯಿನಿ ಮರುಸಿದ್ದೇಶ್ವರಸ್ವಾಮಿ, ಸಿಂಗಟಗೆರೆಯ ಕಲ್ಲೇಶ್ವರಸ್ವಾಮಿ ಮತ್ತು ಆಂಜನೇಯ, ಹೇಮಗಿರಿಯ ಶ್ರೀಮಲ್ಲಿಕಾರ್ಜುನಸ್ವಾಮಿ, ಬೆಲಗೂರಿನ ಪ್ರಸನ್ನರಾಮೇಶ್ವರಸ್ವಾಮಿ, ವಡೇರಹಳ್ಳಿಯ ಶ್ರೀವೀರಭದ್ರೇಶ್ವರಸ್ವಾಮಿ, ಹುಳಿಗೆರೆಯ ಶ್ರೀವೀರಭದ್ರೇಶ್ವರಸ್ವಾಮಿ, ಮುದ್ದೇನಹಳ್ಳಿಯ ಶ್ರೀಬೈರೇಶ್ವರಸ್ವಾಮಿ, ಶೆಟ್ಟಿಹಳ್ಳಿಯ ಬಸವೇಶ್ವರ, ಬಿ. ಹೊಸಳ್ಳಿ ಯಾದವರಹಟ್ಟಿಯ ಶ್ರೀಬಸವೇಶ್ವರಸ್ವಾಮಿ, ತಾಂಡ್ಯದ ಶ್ರೀಪ್ಲೇಗಿನಮ್ಮದೇವಿ, ಗುಂಡೇರಿ ವೀರಭದ್ರೇಶ್ವರ, ಗಿರಿತಿಮ್ಮಾಪುರದ ಶ್ರೀಪಾರ್ವತಿದೇವಿ, ಕಲ್ಲುಂಡಿಯ ಶ್ರೀಸಂಗಮೇಶ್ವರ ಸ್ವಾಮಿಯ ಉತ್ಸವ ಮೂರ್ತಿಗಳೊಂದಿಗೆ ಕಂಚುಗಲ್ಲು ಮತ್ತು ಬಿದರೆ ಸಕಲ ಗ್ರಾಮದೇವರುಗಳ ಉತ್ಸವ ನಡೆಯಿತು.

ನ. 19ರ ಶುಕ್ರವಾರ ಶ್ರೀಗುರುದೊಡ್ಡಜ್ಜನವರ ನೂತನ ಗದ್ದುಗೆಯಲ್ಲಿ ವಿಶೇಷಪೂಜೆ, ಗುಗ್ಗಳಸೇವೆ, ಪಲ್ಲಕಿ ಉತ್ಸವ, ದೀಪೋತ್ಸವದೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆಬಿತ್ತು.

ಐದು ದಿನಗಳ ಕಾಲ ಗ್ರಾಮದಲ್ಲಿ ಹಬ್ಬದ ವಾತಾವರಣವಿದ್ದು ನಿತ್ಯದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಮಳೆಯ ನಡುವೆಯೂ ಊರಿನ ವಿವಿಧ ಜನಾಂಗದ ಭಕ್ತರ ಸಹಕಾರದಿಂದಾಗಿ ಸಂಪನ್ನಗೊಂಡಿತು.

ಜಾಹಿರಾತು

LEAVE A REPLY

Please enter your comment!
Please enter your name here