ಮೆಸ್ಕಾಂ ಕಛೇರಿಗೆ ಹೋಗಿ ಪಂಪ್‌ಸೆಟ್‌ಗಳಿಗೆ ಟಿ.ಸಿ. ಮಂಜೂರಾಗಿದ್ದು ಯಾವಾಗ ಹಾಕುತ್ತೀರೆಂದು ಕೇಳಿದ ಆ ಗ್ರಾಮದ ರೈತರಿಗೆ ಕಾದಿತ್ತಲ್ಲಿ ಬಿಗ್ ಶಾಕ್!

0
1356

ಕಡೂರು: ರೈತಮಿತ್ರ ಯೋಜನೆಯಡಿ ಕಡಿಮೆ ಹಣದಲ್ಲಿ ಜಮೀನಿನ ಪಂಪ್‌ಸೆಟ್‌ಗಳಿಗೆ ಟಿ.ಸಿ. ಮಂಜೂರು ಮಾಡಿಸುವುದಾಗಿ ನಂಬಿಸಿ ಗ್ರಾಮಸ್ಥರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಏನಿದು ಘಟನೆ:

ಇಲ್ಲಿನ ಕೆಲವು ಗ್ರಾಮಗಳಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ಸರ್ಕಾರದ ರೈತಮಿತ್ರ ಯೋಜನೆಯಡಿ ಕಡಿಮೆ ಹಣದಲ್ಲಿ ರೈತರ ಜಮೀನಿನ ಪಂಪ್‌ಸೆಟ್‌ಗಳಿಗೆ ಟಿ.ಸಿ. ಮಂಜೂರು ಮಾಡಿಸಿಕೊಡುವುದಾಗಿ ಒಬ್ಬೊಬ್ಬರಿಂದ 3-4 ಸಾವಿರ ರೂ. ಗಳನ್ನು ಪಡೆದುಕೊಂಡು ಚಲನ್ ನೀಡಿ ಮಂಜೂರಾತಿ ಆದೇಶಗಳನ್ನು ಗ್ರಾಮಸ್ಥರಿಗೆ ನೀಡಿ ಹೋಗಿರುತ್ತಾರೆ.

ಈ ರೀತಿ ಹಣ ಪಾವತಿಸಿ ಚಲನ್ ಸ್ವೀಕರಿಸಿಕೊಂಡಿದ್ದ ಚಿಕ್ಕಿಂಗಳ ಮತ್ತು ಜಿ.ಕೊಪ್ಪಲು ಗ್ರಾಮದ ಕೆಲವು ರೈತರು ಕಡೂರು ಮೆಸ್ಕಾಂ ಕಛೇರಿಗೆ ಹೋಗಿ ಪಂಪ್‌ಸೆಟ್‌ಗೆ ಟಿ.ಸಿ. ಮಂಜೂರಾಗಿದ್ದು, ಯಾವಾಗ ಹಾಕುತ್ತೀರೆಂದು ಕೇಳಿದಾಗ ಮೆಸ್ಕಾಂ ಕಛೇರಿಯಲ್ಲಿ ದಾಖಲಾತಿಗಳನ್ನು ಪರಿಶೀಲಿಸಿದಾಗ ಕರ್ನಾಟಕ ಸರ್ಕಾರ ಮತ್ತು ಮೆಸ್ಕಾಂ ಇಲಾಖೆಯ ನಕಲಿ ಲೋಗೋಗಳನ್ನು ಬಳಸಿ ನಕಲಿ ಚಲನ್ ತಯಾರಿಸಿ ಮಂಜೂರಾತಿ ಆದೇಶಗಳನ್ನು ನೀಡಿರುವುದು ಕಂಡು ಬಂದಿದೆ.

ಇದೇ ರೀತಿ ಕಡೂರು ತಾಲ್ಲೂಕಿನಲ್ಲಿ ಸುಮಾರು 1-2 ಲಕ್ಷ ರೂ. ರಷ್ಟು ವಂಚನೆ ನಡೆದಿರುವುದು ತಿಳಿದುಬಂದಿದ್ದು, ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ರೈತರಿಗೆ ವಂಚನೆ ಮಾಡಿರುವ ಬಗ್ಗೆ ಸೆ. 04 ರಂದು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮೇಲ್ಕಂಡ ಪ್ರಕರಣದಲ್ಲಿನ 2 ಜನ ಆರೋಪಿಗಳನ್ನು ಪತ್ತೆ ಹೆಚ್ಚಿ ಪ್ರಕರಣ ದಾಖಲಾದ 5 ಗಂಟೆಯೊಳಗಾಗಿ ಆರೋಪಿಗಳನ್ನು ಬಂಧಿಸಿ ಇವರಿಂದ ಲ್ಯಾಪ್‌ಟಾಪ್‌, ಪೆನ್‌ಡ್ರೈವ್, ಮೊಬೈಲ್ ಫೋನ್‌ಗಳು ಮತ್ತು ನಕಲಿ ಚಲನ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಪತ್ತೆಕಾರ್ಯದಲ್ಲಿ ಕಡೂರು ಪೊಲೀಸ್ ಠಾಣೆಯ ಪಿಎಸ್ಐ ರಮ್ಯ ಎನ್. ಕೆ. ಮತ್ತು ಸಿಬ್ಬಂದಿಗಳಾದ ಕೃಷ್ಣಮೂರ್ತಿ, ರಾಜಪ್ಪ ಬಿ. ಹೆಚ್., ಮಧುಕುಮಾರ್‌ ಮತ್ತು ಈಶ್ವರಪ್ಪ ರವರು ಭಾಗವಹಿಸಿದ್ದರು.

ಈ ರೀತಿಯ ವಂಚನೆ ರಾಜ್ಯದ ಯಾವುದೇ ಸ್ಥಳದಲ್ಲಿ ಕಂಡುಬಂದಲ್ಲಿ ಕಡೂರು ಪೊಲೀಸ್ ಠಾಣೆಗೆ ಬಂದು ದಾಖಲಾತಿಗಳೊಂದಿಗೆ ಮಾಹಿತಿ ನೀಡಲು ಕೋರಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here