ಮಾಜಿ ಸಚಿವರೊಬ್ಬರು ಕುಕ್ಕರ್ ಬಾಂಬ್ ಇಡುವವರ ಸಂತತಿಗೆ ಆಶ್ರಯ ನೀಡಿದ್ದಾರೆ ; ಕಿಮ್ಮನೆ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ ಆರಗ
ತೀರ್ಥಹಳ್ಳಿ : ಕಾಂಗ್ರೆಸ್ ಅವಧಿಯಲ್ಲಿ ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ನೀಡಿ ಮನೆನಾಡಿನ ರೈತರ ಒಕ್ಕಲೆಬ್ಬಿಸುವುದಕ್ಕೆ ಆಹ್ವಾನ ನೀಡಿದ್ದರು. ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಹಸಿರುಪೀಠಕ್ಕೆ ಪ್ರಕರಣ ವರ್ಗಾಯಿಸಲಾಗಿತ್ತು. ನನ್ನ ತೀವ್ರ ವಿರೋಧದಿಂದ ಕಸ್ತೂರಿ ರಂಗನ್ ವರದಿ ಜಾರಿಯಾಗದಂತೆ ತಡೆದಿದ್ದೇನೆ. ದೇಶ ಆಳಿ ರೈತರ ರಕ್ತ ಹಿಂಡಿದ ಕಾಂಗ್ರೆಸ್ ಜನರ ಕಿವಿಗೆ ಹೂ ಇಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಅರಾಜಕಥೆ ಸೃಷ್ಟಿಯಾಗಲಿದೆ. ಶರಾವತಿ ಮುಳುಗಡೆ ಸಂತ್ರಸ್ತರ ಕಡತ ನಿನ್ನೆ (ಮಂಗಳವಾರ) ತಯಾರಾಗಿದ್ದು ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಘೋಷಿಸಿದ್ದಾರೆ.

ತೀರ್ಥಹಳ್ಳಿಯ ಎಪಿಎಂಸಿ ಸಮೀಪ ಬಿಜೆಪಿ ಪಕ್ಷದ ಜಿಲ್ಲಾ ಮಟ್ಟದ ರೈತ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಕಳೆದ 60 ವರ್ಷದಲ್ಲಿ ಮಾಡದ ಅಭಿವೃದ್ದಿಯನ್ನು ಬಿಜೆಪಿ ಮಾಡಿ ತೋರಿಸಿದೆ. ರೈತರ ಪರಿಸ್ಥಿತಿ ಅಭೂತಪೂರ್ವ ರೀತಿಯಲ್ಲಿ ಸುಧಾರಿಸಿದೆ. ಬೆಳೆಗಳಿಗೆ ಒಳ್ಳೆ ಬೆಲೆ ದೊರೆತು ಮಧ್ಯವರ್ತಿಗಳ ಹಾವಳಿ ದೂರವಾಗಿದೆ ಎಂದು ವಿವರಿಸಿದರು.
ಶಿವಮೊಗ್ಗ ಜಿಲ್ಲೆ ವೈಚಾರಿಕ ಶಕ್ತಿಗೆ, ಚಿಂತನೆಗೆ ಹೆಸರು ವಾಸಿಯಾಗಿದೆ. ತೀರ್ಥಹಳ್ಳಿಯಂತಹ ಪ್ರದೇಶ ರಾಷ್ಟ್ರಪ್ರೇಮವನ್ನು ಉಕ್ಕಿಸಬೇಕಾಗಿತ್ತು. ಆದರೆ ಇಲ್ಲಿನ ಮಾಜಿ ಸಚಿವರೊಬ್ಬರು ಕುಕ್ಕರ್ ಬಾಂಬ್ ಇಡುವವರ ಸಂತತಿಗೆ ಆಶ್ರಯ ನೀಡಿದ್ದಾರೆ ಎಂದು ತೀಕ್ಷ್ಣ ವಾಗ್ದಾಳಿ ನಡೆಸಿದರಲ್ಲದೇ ಭಾರತದಲ್ಲಿ ಬ್ಯಾಲೆಟ್ ಮೂಲಕ ಪ್ರಜಾಪ್ರಭುತ್ವ ಉಳಿದಿದೆ. ನಕ್ಸಲ್, ಬುಲೆಟ್ ವಾದ ಈಗ ನೆಲಕಚ್ಚಿದೆ. ಡಿ.ಜೆ. ಹಳ್ಳಿ, ಕೆ.ಜೆ. ಹಳ್ಳಿ ಘಟನೆಯಲ್ಲಿ ಪಾಲ್ಗೊಂಡವರು ನಮ್ಮ ಸಹೋದರರು ಎಂಬ ಹೇಳಿಕೆ ನೀಡುವ ಕೆಪಿಸಿಸಿ ಅಧ್ಯಕ್ಷರು ಯಾರ ಪರ ಎನ್ನುವುದನ್ನು ಜನತೆ ಈಗಾಗಲೇ ತೀರ್ಮಾನಿಸಿದ್ದಾರೆ ಎಂದರು.
ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಜೋಡಿ ಯಾವುದೇ ಕಾರಣಕ್ಕೂ ಒಂದಾಗಲ್ಲ. ಕ್ಷೇತ್ರದಲ್ಲೂ ಕಿಮ್ಮನೆ ರತ್ನಾಕರ, ಆರ್.ಎಂ. ಮಂಜುನಾಥ ಗೌಡ ಒಂದಾಗಲು ಸಾಧ್ಯವೇ ಇಲ್ಲ. ಬಿಜೆಪಿ ಭಾರತದ ಹಿಂದೂ ಧರ್ಮ ಉಳಿಸುವ ಪ್ರಮಾಣಿಕ ಪ್ರಯತ್ನ ಮಾಡಿದೆ. ಹಿಂದೂ ದೇವಾಲಯ ಕೆಡವಿ ಸ್ಥಾಪಿಸಿದ ಮಸೀದಿಗಳನ್ನು ಹಿಂದುಗಳಿಗೆ ಸುಪ್ರೀಂ ಕೋರ್ಟ್ ಪುನರ್ ಸ್ಥಾಪನೆಗೆ ಆವಕಾಶ ನೀಡಬೇಕು ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ವ್ಯಾಲಿಡಿಟಿ ಮುಗಿದಿದೆ. 70 ವರ್ಷ ಆಡಳಿತದಲ್ಲಿ ಮಾಡದಿರುವುದನ್ನು ಈಗ ಜನರಮುಂದೆ ಇಡುತ್ತಿರುವ ಹಿಂದೆ ಹುನ್ನಾರ ಅಡಗಿದೆ. ಬಿಜೆಪಿ ಸರ್ಕಾರ ಘೋಷಿಸಿದ ಯೋಜನೆಗಳು ಪ್ರತಿ ಮನೆಗೂ ತಲುಪಿದೆ. ಒಂದು ಕುಟುಂಬದಲ್ಲಿ 5 ರಿಂದ 6 ಫಲಾನುಭವಿಗಳ ಪಟ್ಟಿ ತಯಾರು ಮಾಡಬಹುದು. ವಿಶ್ವದ ಏಕೈಕ ಹಿಂದೂ ರಾಷ್ಟ್ರ ರಕ್ಷಣೆ ಮಾಡುವುದು ಹಿಂದುಗಳ ಕರ್ತವ್ಯವಾಗಬೇಕು ಎಂದರು.
ವೇದಿಕೆಯಲ್ಲಿ ಮಾಜಿ ಶಾಸಕ ಸ್ವಾಮಿರಾವ್, ಮುಖಂಡರಾದ ಆರ್.ಮದನ್, ಬೇಗುವಳ್ಳಿ ಸತೀಶ್, ನವೀನ್ ಹೆದ್ದೂರು, ಸಾಲೇಕೊಪ್ಪ ರಾಮಚಂದ್ರ, ದತ್ತಾತ್ರಿ, ಬಾಳೇಬೈಲು ರಾಘವೇಂದ್ರ, ಮಹೇಶ್ ಹುಲ್ಕುಳಿ, ನಾಗರಾಜ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮದ ನಂತರ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಭರ್ಜರಿ ರೋಡ್ ಶೋ ನಡೆಯಿತು.